ಬಡಾವಣೆ ಹಸ್ತಾಂತರಕ್ಕೆ ಒತ್ತಾಯಿಸಿ ಶ್ರೀರಾಂಪುರ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಅಂಚೆ ಚಳವಳಿ

mysore
Published on

ಮೈಸೂರು: ಪಾಲಿಕೆಯ 65ನೇ ವಾರ್ಡ್ ವ್ಯಾಪ್ತಿಗೆ ಬರುವ ಎಲ್ಲ ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರಿಸಬೇಕು ಎಂದು ಶ್ರೀರಾಂಪುರ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಭಾನುವಾರ ಅಂಚೆ ಚಳವಳಿ ನಡೆಯಿತು.

ಶ್ರೀರಾಂಪುರ 2ನೇ ಹಂತದ ಬೆಮೆಲ್ ಬಡಾವಣೆಯಲ್ಲಿರುವ ಅಂಚೆಪೆಟ್ಟಿಯ ಮೂಲಕ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಕಳುಹಿಸಿ ಪ್ರತಿಭಟಿಸಿದರು. ಇಲ್ಲಿಯ ಕಂದಾಯ ನಗರ, ಮುನಿನಾರಾಯಣಪ್ಪ ಬಡಾವಣೆ, ಪ್ರೀತಿ ಬಡಾವಣೆ, ಸಾಯಿ ಬಡಾವಣೆ, ಡಿ.ಜಿ.ಎಂ ಬಡಾವಣೆ, ಹಂಸ ಬಡಾವಣೆ. ಭವ್ಯಭಾರತ ಬಡಾವಣೆ, ಎಂ.ಡಿ.ಸಿ.ಸಿ. ಬಡಾವಣೆ, ಎಂ.ಸಿ.ಡಿ. ಬಡಾವಣೆ. ಶ್ರೀವಿಲಾಸ ಬಡಾವಣೆ. ಸುಧೀಂದ್ರ ಬಡಾವಣೆ, ಪಿನಾಕಲ್ ನೆಸ್ಟ್, ಪದ್ಮಾವತಿ, ಗಗನಶಂಕರ, ಶಕ್ತಿ ಬಡಾವಣೆಗಳ ನಿರ್ವಹಣೆಯಾಗುತ್ತಿಲ್ಲ ಎಂದು ಕಿಡಿಕಾರಿದರು.

ಪಂಚಾಯಿತಿ ಸದಸ್ಯರಾಗಲಿ, ಪಟ್ಟಣ ಪಂಚಾಯಿತಿ ಸದಸ್ಯರಾಗಲಿ, ನಗರಸಭೆ ಸದಸ್ಯರಾಗಲಿ ಇಲ್ಲ. ಕಳೆದ 15 ವರ್ಷಗಳಿಂದ ಇಲ್ಲಿಯ ನಿವಾಸಿಗಳು ಮೈಸೂರು ಪಾಲಿಕೆಯ 65ನೇ ವಾರ್ಡಿನ ಸದಸ್ಯರಿಗೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಆದರೆ, ಯಾವುದೇ ಮೂಲ ಸೌಕರ್ಯಗಳನ್ನೂ ಕಲ್ಪಿಸಿಕೊಟ್ಟಿಲ್ಲ ಎಂದು ದೂರಿದರು.

ಮುಡಾದಿಂದ ಈ ಎಲ್ಲ ಬಡಾವಣೆಗಳನ್ನು ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಹಸ್ತಾಂತರವಾದರೆ ನಾವು ಕಟ್ಟುವ ತೆರಿಗೆ ಹಣವನ್ನು ಪಾಲಿಕೆ ವಿನಿಯೋಗಿಸಲು ಸಾಧ್ಯವಾಗಲ್ಲ. ಶ್ರೀರಾಂಪುರ ಪಟ್ಟಣ ಪಂಚಾಯಿತಿಯವರು ಪಾಲಿಕೆ ವ್ಯಾಪ್ತಿಯ ಒಳಗೆ ಬಂದು ಕೆಲಸ ಮಾಡಲು ಸಾಧ್ಯವಿಲ್ಲ. ಇದರಿಂದ ಇಲ್ಲಿಯ ಬಡಾವಣೆಗಳು ಅತಂತ್ರವಾಗಿವೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯ 65ನೇ ವಾರ್ಡ್ ವ್ಯಾಪ್ತಿಗೆ ಬರುವ ಎಲ್ಲ ಬಡಾವಣೆಗಳನ್ನು ಮುಡಾದಿಂದ ಮೈಸೂರು ಪಾಲಿಕೆಗೆ ಹಸ್ತಾಂತರಿಸಬೇಕು. ಇದರಿಂದ ಇಲ್ಲಿಯ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು. ಸಂಘಟನೆಯ ಜೆ.ಜಯಂತ್, ಕೆ.ನಾಗರಾಜ್, ರಾಮರಾಜೇ ಅರಸ್, ಎಸ್.ಬಸವೇಗೌಡ, ಎನ್.ಡಿ.ಮಮತಾ, ಬಿ.ಎಂ.ಪರಮೇಶ್, ಜಯಪ್ರಕಾಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net