ಬಡವರು, ಮಹಿಳೆಯರಿಗೆ ಅನ್ಯಾಯ

h6-Congress 1
Published on

ಹುಬ್ಬಳ್ಳಿ: ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ರೈತರು, ಬಡವರು, ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದರು.

ನಗರದ ಬೆಂಗೇರಿಯಲ್ಲಿ ಶನಿವಾರ ಸಂಜೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಉಣಕಲ್ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಮಹಿಳಾ ಧ್ವನಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ರಾಮನ ಆಳ್ವಿಕೆಯಲ್ಲಿ ಜನರು ನೆಮ್ಮದಿಯಿಂದ ಇದ್ದರು. ಕಣ್ಣೀರು ಹಾಕುತ್ತಿರಲಿಲ್ಲ. ಇದೀಗ ಶ್ರೀ ರಾಮ ಹುಟ್ಟಿದ್ದ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 100 ರೂ. ಆಗಿದೆ. ಅದೇ ರಾಮಣನ ನಾಡು ಶ್ರೀಲಂಕಾದಲ್ಲಿ 38 ರೂ. ಇದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನರ ನೆಮ್ಮದಿ ಹಾಳಾಗಿದೆ ಎಂದು ಟೀಕಿಸಿದರು.

ಮಾಜಿ ಎಂಎಲ್​ಸಿ ನಾಗರಾಜ ಛಬ್ಬಿ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲಿ ಪುರುಷರಿಗೆ ಸಮಾನವಾಗಿ ನಿಲ್ಲಬೇಕು. ರಾಜಕೀಯದಲ್ಲಿ ಮೀಸಲಾತಿ ಹೊರತುಪಡಿಸಿ ಸಮಾಜದ ಎಲ್ಲ ಸ್ತರಗಳಲ್ಲಿ ಮುಂದೆ ಬರಬೇಕು. ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ಬಹಳ ಹಿಂದುಳಿದಿದೆ. ಇಲ್ಲಿ ಮುಂದಿನ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು. ಹಾಗಾದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಕೆಪಿಸಿಸಿ ಸಂಯೋಜಕ ರಜತ ಉಳ್ಳಾಗಡ್ಡಿಮಠ, ಎಐಸಿಸಿ ಸದಸ್ಯ ಶಾಕೀರ ಸನದಿ, ಕೆಪಿಸಿಸಿ ಸದಸ್ಯ ಸತೀಶ ಮೆಹರವಾಡೆ, ತಾರಾದೇವಿ ವಾಲಿ, ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ, ಮಾಜಿ ಮೇಯರ್​ಗಳಾದ ಪ್ರಕಾಶ ಕ್ಯಾರಕಟ್ಟಿ, ವೆಂಕಟೇಶ ಮೇಸ್ತ್ರಿ; ಚೇತನ ಬಿಜವಾಡ, ಸಮೀರ್ ಖಾನ್, ಜ್ಯೋತಿ ವಾಲಿಕರ, ಇತರರು ಇದ್ದರು. ಅಬ್ದುಲ್ ಗನಿ ವಲಿಅಹ್ಮದ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net