ವಿರಾಜಪೇಟೆ: ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ದಶಕಗಳಿಂದ ದಲಿತರು, ಆದಿವಾಸಿಗಳು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದು, ಸೂರಿಲ್ಲದವರಿಗೆ ತಲೆಗೊಂದು ಸೂರು ನೀಡಿ ಎಂಬ ನಮ್ಮ ಬೇಡಿಕೆಗಳನ್ನು ಅಮ್ಮತ್ತಿ ಕಾರ್ಮಾಡು ಪಂಚಾಯಿತಿ ಪರೋಕ್ಷವಾಗಿ ತಿರಸ್ಕರಿಸುತ್ತಿರುವುದನ್ನು ಸಿಪಿಐಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಮಹಾದೇವನ್ ಖಂಡಿಸಿದರು.
ಸಿಪಿಐಎಂ ಪಕ್ಷ ರೈತರ, ಬಡವರ ಹಾಗೂ ಕೂಲಿ ಕಾರ್ಮಿಕರ ಏಳಿಗೆಗಾಗಿ ಸದಾ ಶ್ರಮಿಸುತ್ತಿದೆ. ಕಾಫಿ ಧಾರಣೆ ಕುಸಿತ, ಕಸ್ತೂರಿರಂಗನ್ ವರದಿ ಸೇರಿದಂತೆ ಹಲವಾರು ರೈತರ ಹೋರಾಟದಲ್ಲಿ ನಮ್ಮ ಪಕ್ಷ ಭಾಗಿಯಾಗಿದೆ. ನಾವು ರೈತರ ಪರವಾಗಿಯೇ ಇದ್ದೇವೆಯೇ ಹೊರತು ರೈತ ವಿರೋಧಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಮ್ಮತ್ತಿ ಕಾರ್ಮಾಡು ಪಂಚಾಯಿತಿಯ ಕೆಲವು ಬಿಜೆಪಿ ಸದಸ್ಯರು ನಮ್ಮ ಪಕ್ಷವನ್ನು ಮತ್ತು ನಮ್ಮ ಹೋರಾಟವನ್ನು ರೈತ ವಿರೋಧಿ ನೀತಿ ಎಂದು ಬಿಂಬಿಸುತ್ತಿದ್ದಾರೆ. ಇದು ಅವರ ಹೀನ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ರಾಚಪ್ಪಾಜಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ನೀಡಿ ಎಂದು ಮನವಿ ಸಲ್ಲಿಸಿದರೆ, ನಮಗೆ ನಿವೇಶನ ನೀಡುವ ಅನುಮತಿ ಇಲ್ಲ, ತಹಸೀಲ್ದಾರ್ ಬಳಿ ಹೋಗಿ ಎನ್ನುತ್ತಾರೆ. ತಹಸೀಲ್ದಾರ್ ಬಳಿ ಹೋದರೆ ಜಿಲ್ಲಾಧಿಕಾರಿಗಳ ಬಳಿ ಹೋಗಿ ಎನ್ನುತ್ತಾರೆ. ಜಿಲ್ಲಾಧಿಕಾರಿ ಬಳಿ ತೆರಳಿದರೆ ಪಂಚಾಯಿತಿ ಹೋಗಿ ಎಂದು ಹೇಳುತ್ತಾರೆ. ಇಂತಹ ಪರಿಸ್ಥಿತಿಯನ್ನು ಅವಲೋಕನ ಮಾಡಿದರೆ ಬಡವರಿಗೆ ಸೂರು ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಪರೋಕ್ಷವಾಗಿ ಆಡುತ್ತಿರುವ ನಾಟಕ ಆಗಿದೆ. ಬಡವರಿಗೆ ಸೂರು ಸಿಗುವವರೆಗೂ ಹೊರಾಟವನ್ನು ಕೈ ಬಿಡುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಇಬ್ರಾಹಿಂ, ಮಾಂಕು ಉಪಸ್ಥಿತರಿದ್ದರು.