

ಎಚ್.ಡಿ.ಕೋಟೆ: ತಾಲೂಕಿನ ಬಡವರಿಗೆ ತೊಂದರೆ ಆಗದಂತೆ ಸಾಗುವಳಿ ಪತ್ರ ವಿತರಣೆ ಮಾಡಲು ಕ್ರಮವಹಿಸಬೇಕು. ಇಲ್ಲದಿದ್ದರೆ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಿನ ಸಾರ್ವಜನಿಕರ ವೈಯಕ್ತಿಕ ದೂರುಗಳನ್ನು ಆಲಿಸಿ ಮಾತನಾಡಿದ ಅವರು, ತಹಸೀಲ್ದಾರ್ ಕಚೇರಿಯಲ್ಲಿ ಹಣ ನೀಡಿದವರಿಗೆ ಮಾತ್ರ ಸಾಗುವಳಿ ಪತ್ರ ಮಂಜೂರು ಮಾಡಲಾಗುತ್ತಿದೆ. ಬಡ ವರ್ಗದವರಿಗೆ ಸಾಗುವಳಿ ಮಂಜೂರು ಮಾಡಿಲ್ಲ ಎಂಬ ದೂರು ಕೇಳಿ ಬಂದಿದೆ. ಜತೆಗೆ ಜಮೀನು ಹೊಂದಿರುವವರಿಗೆ ಸಾಗುವಳಿ ಮಂಜೂರು ಮಾಡಿರುವುದು ಕಂಡುಬಂದಿದೆ. ರೈತರಿಗೆ ಅನುಕೂಲ ಆಗಲಿ ಎಂದು ಸರ್ಕಾರ ಅಕ್ರಮ- ಸಕ್ರಮ ಸಮಿತಿ ರಚನೆ ಮಾಡಿದೆ. ಹೀಗಾಗಿ ಕಡು ಬಡವರಿಗೆ ಹಾಗೂ ಮೂವತ್ತು ನಲವತ್ತು ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ಮಂಜೂರು ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ನೇರವಾಗಿ ರೈತರಿಂದ ಹಣ ಪಡೆದಿದ್ದಾರೆ ಎಂಬ ಮಾಜಿ ಶಾಸಕ ಚಿಕ್ಕಣ್ಣ ಅವರ ಆರೋಪಕ್ಕೆ ಉತ್ತರಿಸಿದ ತಹಸೀಲ್ದಾರ್ ರತ್ನಾಂಬಿಕಾ ಅವರು, ಸಾಗುವಳಿ ಮಂಜೂರಾತಿಯಲ್ಲಿ ಯಾವುದೇ ರೈತರ ಹತ್ತಿರ ಹಣ ಪಡೆದಿಲ್ಲ. ಪಡೆದಿರುವ ಬಗ್ಗೆ ನಿಮ್ಮ ಹತ್ತಿರ ದಾಖಲೆ ಇದ್ದರೆ ಇಲಾಖೆ ಮೇಲ್ಪಟ್ಟದ ಅಧಿಕಾರಿಗಳಿಗೆ ದೂರು ನೀಡಬಹುದು ಎಂದರು.
ಸಾಗುವಳಿ ಮಂಜೂರು ಮಾಡುವ ವಿಚಾರದಲ್ಲಿ ರೈತರಿಂದ ತಕರಾರು ಇದ್ದರೆ ಅಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಗುವಳಿ ಮಂಜೂರು ಮಾಡಲು ಬರುವುದಿಲ್ಲ. ಮತ್ತೊಮ್ಮೆ ಕಂದಾಯ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಅವರಿಂದ ಸ್ಥಳ ವರದಿ ಮಾಡಿಸಿ ನಂತರ ಸಮಿತಿ ಸದಸ್ಯರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಿದ ನಂತರ ಸಾಗುವಳಿ ಪತ್ರ ನೀಡುವ ಬಗ್ಗೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಹಲವಾರು ಸಾಗುವಳಿ ಮಂಜೂರಾತಿಗೆ ಸಂಬಂಧಿಸಿದಂತೆ ತಮಗೆ ಆಗಿರುವ ಅನ್ಯಾಯದ ಬಗ್ಗೆ ಮಾಜಿ ಶಾಸಕರಲ್ಲಿ ಅವಲತ್ತುಕೊಂಡರು. ಮುಖಂಡರಾದ ನರಸಿಂಹೇಗೌಡ, ರಾಜೇಂದ್ರ, ಗೋಪಾಲಸ್ವಾಮಿ, ನಂಜುಂಡ ಮೂರ್ತಿ, ಸಫೀಉಲ್ಲಾ, ಚಂದ್ರೇಗೌಡ, ಅನು, ಹೋ.ಕೆ ಮಹೇಂದ್ರ, ಚಾಕಹಳ್ಳಿ ಕೃಷ್ಣ, ಎ.ಜೆ. ಕಾಳೇಗೌಡ, ರವಿ, ಪ್ರಕಾಶ್, ಮುತ್ತುರಾಜು, ಸಣ್ಣ ಕುಮಾರ್, ಚನ್ನಕೋಟೆ, ಪುಟ್ಟೇಗೌಡ, ಬೆಳಗನಹಳ್ಳಿ ಶಿವರಾಜು ಇದ್ದರು.