ಬಡವರಿಗೆ ಸಂಜೀವಿನಿ ಸಾಮೂಹಿಕ ವಿವಾಹ

oplus_2
oplus_2
Published on

ಕೊಡೇಕಲ್: ಸಾಮೂಹಿಕ ಮದುವೆ ಬಡವರ ಮದುವೆಯಲ್ಲ. ಅದು ಭಾಗ್ಯವಂತರ ಮದುವೆಯಾಗಿದೆ ಎಂದು ಶೂರಪಲಿಯ ಶ್ರೀ ಗಿರೀಶಾನಂದ ಮಹಾರಾಜ ಹೇಳಿದರು.

ಜೋಗುಂಡಬಾವಿ ಗ್ರಾಮದಲ್ಲಿ ಮಂಗಳವಾರ ನಡೆದ ದ್ಯಾವಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಉಚಿತ ಸಾಮೂಹಿಕ ವಿವಾಹ ಕರ‍್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಜೀವನದಲ್ಲಿ ಸ್ವಾರ್ಥಪರ ಚಿಂತನೆಗಳನ್ನು ಕೈಬಿಟ್ಟು ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನಾವು, ನಮ್ಮ ಕುಟುಂಬವಷ್ಟೆ ಚನ್ನಾಗಿದ್ದರೆ ಸಾಲದು ನಮ್ಮ ಸುತ್ತಮುತ್ತಲಿನವರು ಸಂತೋಷವಾಗಿ ಇರಬೇಕು ಎನ್ನುವ ಮನೋಭಾವ ಹೊಂದಿದಾಗ ಮಾತ್ರ ನಮ್ಮ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.

ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ಜಾತ್ರೆ, ಉತ್ಸವಗಳು ಗ್ರಾಮಗಳಲ್ಲಿ ಸಾಮರಸ್ಯ ಮೂಡಿಸುತ್ತವೆ. ದುಂದು ವೆಚ್ಚ ಮಾಡಿ ಮದುವೆ ಮಾಡುವುದರ ಬದಲಾಗಿ ಸಾಮೂಹಿಕ ವಿವಾಹ ಮಾಡಿಕೊಳ್ಳುವುದು ಒಳ್ಳೆಯದು.

ಮಕ್ಕಳನ್ನು ಡಾಕ್ಟರ್, ಇಂಜಿನೀಯರ ಸೇರಿ ಉನ್ನತ ಪದವಿ ಶಿಕ್ಷಣವನ್ನು ಕೊಡಿಸಬೆಕೆನ್ನುವುದು ಪ್ರತಿಯೊಬ್ಬ ಪಾಲಕರ ಆಸೆಯಾಗಿರುತ್ತದೆ ಆದರೆ ನಿಮಗೆ ಜನಿಸುವ ಮಕ್ಕಳಲ್ಲಿ ಒಬ್ಬನನ್ನು ಸೈನಿಕನ್ನಾಗಿಸುವ ಮೂಲಕ ಭಾರತ ಮಾತೆಯ ಸೇವೆಗೆ ಕಳುಹಿಸಿ ಎಂದು ನೂತನ ದಂಪತಿಗಳಿಗೆ ಮನವಿ ಮಾಡಿದರು.

ಕಳೆದ ೨೫ ವರ್ಷಗಳಿಂದ ಗ್ರಾಮದಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ೪೦ ಜೋಡಿಗಳು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಹಸೆಮಣೆ ಏರಿದರು. ಶ್ರೀ ವೃಷಭೇಂದ್ರ ಅಪ್ಪ, ಶ್ರೀ ವೀರಭದ್ರ ಸ್ವಾಮೀಜಿ, ಶ್ರೀ ಗಿರಿಯಪ್ಪ ಮುತ್ಯಾ, ಶ್ರೀ ಸಣ್ಣಕ್ಕೆಪ್ಪ ಮುತ್ಯಾ, ಶ್ರೀ ಅರವಿಂದ ಮಹಾರಾಜ, ಶ್ರೀ ಶಂಕರಲಿAಗ ಮಹಾರಾಜ ಸೇರಿ ವಿವಿಧ ಮಠಾಧೀಶರು ಭಾಗವಹಿಸಿದ್ದರು.

ಯುವರಾಜ ರಾಜಾ ಜಿತೇಂದ್ರನಾಯಕ ಜಹಾಗೀರದಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಗದ್ದೆಪ್ಪ ಪೂಜಾರಿ, ನಾಗಯ್ಯ ಹಿರೇಮಠ, ವೀರಭದ್ರಯ್ಯ ಹಿರೇಮಠ, ಸೋಮಣ್ಣ ಮಾಮನಿ, ಅಂಬ್ರಣ್ಣ ಹುಡೇದ, ಅಂಬ್ರಣ್ಣ ಕುಂಬಾರ, ಯಲ್ಲಪ್ಪ ಗೌಡ್ರ ಅಚ್ಚಪ್ಪಗೌಡ ಗೌಡ್ರ, ಹಣಮಂತ ಗುರಿಕಾರ, ಶರಣಬಸವ ಗೌಡ್ರ, ಸೋಮನಾಥ ಗೌಡ್ರು, ಯಮನಪ್ಪ ಕೆಂಭಾವಿ, ಹಣಮಂತ ಬಿ.ಗುರಿಕಾರ ಇತರರಿದ್ದರು. ದ್ಯಾಮಣ್ಣ ಸ್ವಾಗತಿಸಿದರು. ಮಾಳಿಂಗರಾಯ ವಂದಿಸಿದರು. ಸಿದ್ದು ಬಡಿಗೇರ ಕರ‍್ಯಕ್ರಮ ನಿರೂಪಿಸಿದರು.

ಇದಕ್ಕೂ ಪೂರ್ವ ಸೋಮವಾರ ಅಹೋರಾತ್ರಿ ದೇವಿಯ ಗಂಗಸ್ನಾನ ನಂತರ ಅದ್ದೂರಿ ಮೆರವಣಿಗೆ ಜರುಗಿತು. ಮಂಗಳವಾರ ಬೆಳಗ್ಗೆ ದೇವಸ್ಥಾನದ ಮುಂಭಾಗದ ಕಟ್ಟೆಯ ಮೇಲೆ ವಿರಾಜಮಾನಳಾಗಿದ್ದ ದೇವಿಗೆ ದೈವದ ಸೀರೆ ಉಡಿಸಿ ಉಡಿ ತುಂಬಿದರು. ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net