

ಕಡೂರು: ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ತಾಪಂನಲ್ಲಿ ಬಿಸಿಎಂ ಇಲಾಖೆಯಿಂದ ನಡೆದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜಯಂತಿ ಆಚರಣೆಯಲ್ಲಿ ಮಾತನಾಡಿ, ಅರಸು ಅವರು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಒತ್ತುಕೊಟ್ಟಿದ್ದರು. ಸಣ್ಣ ಸಣ್ಣ ಸಮಾಜಗಳನ್ನು ಗುರುತಿಸಿ ಮೇಲೆತ್ತಲು ಶ್ರಮಿಸಿದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿ ದೀನ ದಲಿತರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.
ಗೇಣಿಯನ್ನು ನಂಬಿ ಬದುಕುತ್ತಿದ್ದ ಲಕ್ಷಾಂತರ ರೈತ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಭೂಸುಧಾರಣೆ ಕಾನೂನು ಜಾರಿಗೆ ತಂದು ಭೂರಹಿತರನ್ನು ಭೂಮಿ ಒಡೆಯರನ್ನಾಗಿ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಮೇಲ್ವರ್ಗದ ಶಕ್ತಿಯ ನಡುವೆ ಅತಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡಿದ್ದರ ಫಲವಾಗಿ ನಮ್ಮಂತಹ ರಾಜಕಾರಣದ ಪೀಳಿಗೆಗೆ ರಾಜಕೀಯ ಫಲಾನುಭವಿಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಎಂ.ಎಸ್.ಹೆಳವಾರ್ ಮಾತನಾಡಿ, ಸಾಮಾಜಿಕ ನ್ಯಾಯಕ್ಕಾಗಿ ಹಾಗೂ ಕೆಳಮಟ್ಟದ ಜನಸಮುದಾಯದ ಪ್ರಗತಿಗೆ ಶ್ರಮಿಸಿ, ಉಸಿರಾಗಿ ಬದುಕಿದವರು ಅರಸು ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಹೇಳಿದರು.
ಪ್ರೊ. ದೊರೇಶ್ ಮಾತನಾಡಿ, ಅರಸು ಅವರ ಚಿಂತನೆಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದ್ದವು. ತಬ್ಬಲಿ ಸಮುದಾಯಗಳಿಗೆ ಧ್ವನಿಯಾಗಿ ಶ್ರಮಿಸಿ ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ನುಡಿ ಬರೆದರು ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಆಸಂಧಿ ಕಲ್ಲೇಶ್ ಮಾತನಾಡಿ, ಜೀತ ಹಾಗೂ ಮಲ ಹೊರುವ ಪದ್ಧತಿಗಳನ್ನು ನಿಷೇಧಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅರ್ಥ ಕಲ್ಪಿಸಿಕೊಟ್ಟರು. ಜನಸಂಖ್ಯೆ ಆಧಾರದ ಮೇಲೆ ಹಿಂದುಳಿದ ವರ್ಗಗಳಿಗೂ ಮೀಸಲಾತಿ ಜಾರಿಗೆ ತರುವ ಮೂಲಕ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು.
ಬಿಸಿಎಂ ವಸತಿ ನಿಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಾಪಂ ಇಒ ಸಿ.ಆರ್.ಪ್ರವೀಣ್, ಉಪತಹಸೀಲ್ದಾರ್ ಅಶೋಕ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದೇವರಾಜ್, ಪುರಸಭಾ ಸದಸ್ಯರಾದ ಮರುಗುದ್ದಿ ಮನು, ಇಕ್ಬಾಲ್, ಕೃಷ್ಣಪ್ಪ, ಎನ್.ಬಷೀರ್‌ಸಾಬ್, ಲಕ್ಷ್ಮಣ್, ಮಲ್ಲಿದೇವಿಹಳ್ಳಿ ಶ್ರೀನಿವಾಸ್, ದೇವೇಂದ್ರ, ಖಾದರ್, ನಿಲಯದ ಮೇಲ್ವಿಚಾರಕರಾದ ಅನಿಲ್, ರವಿಕುಮಾರ್, ಮಮತಾ, ಮಂಜುನಾಥ್, ವಿಶ್ವನಾಥ್, ಅಜಿತ್, ಸುರೇಶ್, ಪ್ರೇಮಾ, ವಿಂದ್ಯಾ, ಗೀತಾ ಇತರರಿದ್ದರು.