

ಬೈಲಹೊಂಗಲ, ಬೆಳಗಾವಿ: ಜನತೆಯ ಆರೋಗ್ಯದ ಹಿತದೃಷ್ಟಿ ಯಿಂದ ಕೇಂದ್ರ ಸರ್ಕಾರದ ಆಯು ಷ್ಮಾನ್ ಭಾರತ ಆರೋಗ್ಯ ವಿಮೆಯೋಜನೆ ಆಸರೆಯಾಗಿದೆ ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು.
ತಾಲೂಕಿನ ದೊಡವಾಡ ಗ್ರಾಮದ ಗ್ರಾಮದೇವತೆ ದೇವಸ್ಥಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆ ಕಾರ್ಡ್‌ಗಳನ್ನು ಗ್ರಾಮದ ಬಿಪಿಎಲ್, ಎಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗಂಭೀರ ಕಾಯಿಲೆಗಳಿಂದಾಗಿ ಆಸ್ಪತ್ರೆಗಳಿಗೆ ದಾಖಲಾದ ಸಂದರ್ಭಗಳಲ್ಲಿ ಅವರ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸುವ ಮೂಲಕ ನೆರವಿಗೆ ನಿಲ್ಲುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದರು. ಬಡವರು ಹೃದ್ರೋಗ, ಲಿವರ್ ಸಮಸ್ಯೆ ಮತ್ತು ಇತರ ಆರೋಗ್ಯ ಸಮಸ್ಯೆಗಳುಂಟಾಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾದ ಸಮಯದಲ್ಲಿ ಆಸ್ಪತ್ರೆ ದುಬಾರಿ ಬಿಲ್ ಕಟ್ಟಲು ತುಂಬ ತೊಂದರೆಯಾಗಿ ಸಾವು, ನೋವು ಸಂಭವಿಸುತ್ತಿವೆ.
ಅದನ್ನು ಗಮನಿಸಿ ಕೇಂದ್ರ-ರಾಜ್ಯ ಸರ್ಕಾರ ಸಹಯೋಗದಲ್ಲಿ ಎಲ್ಲರಿಗೂ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಜಾರಿಗೊಳಿಸಿದೆ ಎಂದರು. ಸೋಮೇಶ್ವರ ಶುಗರ್ಸ್ ನಿರ್ದೇಶಕ ನಿಂಗಪ್ಪ ಚೌಡಣ್ಣವರ, ಮಲ್ಲಪ್ಪ ಯರಿಕಿತ್ತೂರ, ಮಡಿವಾಳೆಪ್ಪ ಭದ್ರಶೆಟ್ಟಿ, ಅನಿಲ ಏಣಗಿ, ಮಲ್ಲಪ್ಪ ಚಂದರಗಿ, ಪಿಕೆಪಿಎಸ್ ನಿರ್ದೇಶಕ ಉದಯ ಕೊಟಬಾಗಿ, ರಾಚಯ್ಯ ಹಿರೇಮಠ, ಪರಪ್ಪ ಚೌಡಣ್ಣವರ, ಗದಿಗೆಪ್ಪ ಶಿಧೂತನವರ, ಈರು ಚೌಡಣ್ಣವರ, ಸತೀಶ ಧಾರವಾಡ, ಮಹಾಂತೇಶ ಬಾಗಲಕೋಟಿ, ಶಿವಾನಂದ ಚೌಡಣ್ಣವರ ಇತರರಿದ್ದರು.