ಬಡವರಿಗೆ ಭೂಮಿ ನೀಡಿ ಬೆಳಕಾದ ಅರಸು

ಬಡವರಿಗೆ ಭೂಮಿ ನೀಡಿ ಬೆಳಕಾದ ಅರಸು
Published on

ಹಾಸನ: ಮೌನ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿ, ಬಡವರು, ಹಿಂದುಳಿದವರು, ತುಳಿತಕ್ಕೊಳಗಾದವರ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಾಮಾಜಿಕ ಕ್ರಾಂತಿಯ ನೇತಾರ, ಪರಿವರ್ತನೆಯ ಹರಿಕಾರ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇವರಾಜ ಅರಸು ಅವರು ತಮಗೆ ಸಿಕ್ಕ ಅಧಿಕಾರವನ್ನು ಸಮಾಜದ ಏಳಿಗೆಗಾಗಿ ಬಳಸಿಕೊಂಡವರು. ಸಮಾಜದಲ್ಲಿದ್ದಂತಹ ಮಲಹೊರುವ ಪದ್ಧತಿಯನ್ನು ಹೋಗಲಾಡಿಸಿ, ಬಡವರಿಗೆ ಭೂಮಿ, ಕಾರ್ಮಿಕರಿಗೆ ಸೂರು ಒದಗಿಸಿ ಸಾಮಾಜಿಕ ಕ್ರಾಂತಿ ಮಾಡಿದರು. ಶತಮಾನಗಳಲ್ಲೂ ತಮ್ಮ ಹೆಸರು ಉಳಿಯುವ ರೀತಿಯಲ್ಲಿ ಕೆಲಸ ಮಾಡಿದರು ಎಂದು ನುಡಿದರು.

ಕರ್ನಾಟಕದ ಇತಿಹಾಸದಲ್ಲಿ ಯಾವಾಗಲೂ ಅಗ್ರಗಣ್ಯ ಸ್ಥಾನದಲ್ಲಿ ಅರಸು ಅವರು ಇರುತ್ತಾರೆ. ಅವರ ಸಾಧನೆಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಅವರ ನಾಯಕತ್ವ ಗುಣವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ಕರ್ನಾಟಕ ಎಂದು ಮರುನಾಮಕರಣ ಮಾಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಎಲ್ಲರೂ ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂಬ ಭಾವನೆಯಿಂದ ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನನ್ನು ಜಾರಿಗೊಳಿಸುವ ಮೂಲಕ ಲಕ್ಷಾಂತರ ಕುಟುಂಬಗಳ ಮನೆಯನ್ನು ಬೆಳಗಿದವರು. ನ್ಯಾಯಬೆಲೆ ಅಂಗಡಿಗಳನ್ನು ತೆರೆದವರು. ಜತೆಗೆ 518 ಹಾಸ್ಟೆಲ್‌ಗಳನ್ನು ಹಾಗೂ ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿ ಹೆಣ್ಣು ಮಕ್ಕಳ ಹಾಸ್ಟೆಲ್‌ಗಳನ್ನು ತೆರೆದರು. 15 ಲಕ್ಷ ವಿದ್ಯಾರ್ಥಿಗಳಿಗೆ ಅಂದಿನ ಕಾಲದಲ್ಲಿಯೇ ಮಧ್ಯಾಹ್ನದ ಊಟದ ಯೋಜನೆ, ಸಾಲಮನ್ನಾ ಮಾಡುವುದಕ್ಕಾಗಿ ಋಣಭಾರ ಕಾಯ್ದೆಯನ್ನು ಜಾರಿಗೆ ತಂದರು ಎಂದು ಹೇಳಿದರು.

ಸಾಹಿತಿ ಎಂ.ಜಿ.ಪರಮೇಶ್ ಮಡಬಲು ಮಾತನಾಡಿ, ಶ್ರೇಷ್ಠ ಗರಡಿಪಟು ಹಾಗೂ ಪುಸ್ತಕ ಪ್ರೇಮಿಯೂ ಆಗಿದ್ದ ಅರಸು ಅವರು ಸಾಹಿತ್ಯ, ಸಂಸ್ಕೃತಿಯೂ ಪ್ರಗತಿ ಆಗಬೇಕೆಂಬ ಕನಸನ್ನು ಕಂಡಿದ್ದರು. ಎಲ್.ಜಿ.ಹಾವನೂರು ವರದಿಯನ್ನು ಜಾರಿಗೆ ತಂದರು. ಜೀತ ಪದ್ಧತಿ ನಿರ್ಮೂಲನೆ ಮಾಡಲು ಹೋರಾಡಿದ್ದು ಗುಡಿಸಲುಮುಕ್ತ ಹಳ್ಳಿಗಳನ್ನು ಮಾಡಲು ಶ್ರಮಿಸಿದರು. ಪ್ರತಿ ಮನೆಗೆ ಬೆಳಕನ್ನು ನೀಡಲು ಭಾಗ್ಯ ಜ್ಯೋತಿ ಯೋಜನೆ ಜಾರಿಗೆ ತಂದರು. ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕುಮಾರ್, ಸಂದೇಶ್, ವಿವಿಧ ಶಾಲಾ ಕಾಲೇಜು, ವಸತಿನಿಲಯದ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net