

ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ
ಅನೇಕ ಕಾರ್ಯಗಳಿಗೆ ಜನರು ಶಕ್ಱಾನುಸಾರ ದಾನ ಮಾಡುತ್ತಾರೆ. ಆದರೆ, ತಾಲೂಕಿನ ಸೂರಣಗಿ ಗ್ರಾಮದ ದಂಪತಿ, ಮೃತಪಟ್ಟ ಮಗನ ಚಿರಸ್ಮರಣೆಗಾಗಿ ತಮ್ಮ ಜಮೀನಿನಲ್ಲಿ ಗ್ರಾಮದ
ಬಡ ಕುಟುಂಬಗಳಿಗೆ ಉಚಿತವಾಗಿ 50 ನಿವೇಶನ ನೀಡಲು ಮುಂದಾಗಿದ್ದಾರೆ. ಈ ಕುರಿತು ಗ್ರಾಮದಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಿದ್ದಾರೆ.
ಸೂರಣಗಿ ಗ್ರಾಮದ ದ್ಯಾಮಣ್ಣ-ಜ್ಯೋತಿ ನೀರಲಗಿ ದಂಪತಿಗೆ 2013ರ ಮೇ 1ರಂದು ಗಂಡು ಮಗು ಜನಿಸಿತ್ತು. ಮುದ್ದಾದ ಮಗುವಿಗೆ ಹೊಟ್ಟೆಯಲ್ಲಿ ವಿಚಿತ್ರ ಗಂಟು ಆಗಿದ್ದರಿಂದ ರಾಜ್ಯದ ಅನೇಕ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರು. ಅದಕ್ಕಾಗಿ ಮೂರೂವರೆ ಎಕರೆ ಜಮೀನು ಮಾರಾಟ ಮಾಡಿ ಬಂದಿದ್ದ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ 2019ರ ಡಿಸೆಂಬರ್ ತಿಂಗಳಲ್ಲಿ ಮಗು ಅಸುನೀಗಿತು. ಮೃತ ಮಗುವಿನ ಚಿರಸ್ಮರಣೆಗಾಗಿ ದಂಪತಿ, ನಿವೇಶನರಹಿತ 50 ಕುಟುಂಬಗಳಿಗೆ ಪ್ಲಾಟ್ ನೀಡಲು ಮುಂದಾಗಿದ್ದಾರೆ. ಬಡ ದಂಪತಿಯ ಕಾರ್ಯವನ್ನು ಗ್ರಾಮಸ್ಥರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಶ್ರೀಮಂತರಲ್ಲ: ದ್ಯಾಮಣ್ಣ ಪದವೀಧರ, ಪತ್ನಿ ಜ್ಯೋತಿ ಪಿಯುಸಿವರೆಗೆ ಓದಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ದ್ಯಾಮಣ್ಣ ಮಗುವಿನ ಆನಾರೋಗ್ಯದ ಕಾರಣದ ಕೆಲಸ ಬಿಟ್ಟಿದ್ದಾರೆ. ಇರುವ 8 ಎಕರೆ ಜಮೀನಿನಲ್ಲಿ ಚಿಕಿತ್ಸೆಗಾಗಿ 3 ಎಕರೆ ಮಾರಾಟ ಮಾಡ್ಡಿದ್ದಾರೆ. ಉಳಿದ 5 ಎಕರೆಯಲ್ಲಿ 2 ಎಕರೆ ಊರಲ್ಲಿ, 3 ಎಕರೆ ಊರಿನಿಂದ ದೂರವಿದೆ. ಊರಿಗೆ ಹೊಂದಿಕೊಂಡಿರುವ 2 ಎಕರೆ ತೋಟದ ಜಮೀನಿನಲ್ಲಿ ಸಣ್ಣ ಮನೆ ನಿರ್ವಿುಸಿಕೊಂಡು 30 ಕುರಿ ಸಾಕಾಣಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ.
ಜೀವನ್ ನೆನಪು ಅಜರಾಮರ: ಮಗನ ನೆನಪು ಮಾಸದಿರಲಿ ಮತ್ತು ತಮ್ಮ ನೋವನ್ನು ಮತ್ತೊಬ್ಬರ ಸಂತೋಷದಲ್ಲಿ ಕಾಣಬೇಕು ಎಂಬ ಕಾರಣದಿಂದ ದಂಪತಿ ಹಿರಿಯರ ಒಪ್ಪಿಗೆ ಪಡೆದಿದ್ದಾರೆ. 2 ಎಕರೆ ಜಮೀನಿನಲ್ಲಿ 18/30 ಅಳತೆಯ 50 ಪ್ಲಾಟ್ ಮಾಡಿ ಜೀವನ್ ನಗರ’ ಎಂಬ ನಾಮಕರಣ ಮಾಡಿ ಗ್ರಾಮದಲ್ಲಿ ಸ್ವಂತ ಮನೆಯಿಲ್ಲದ ಬಡವರಿಗೆ ಯಾವುದೇ ಜಾತಿ, ಮತ, ಭೇದ ಎಣಿಸದೆ ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ.
ರಕ್ತ ಸಂಬಂಧದಲ್ಲಿ ಮದುವೆ ಆಗಿದ್ದರಿಂದ ಮಗುವಿಗೆ ಅನಾರೋಗ್ಯ ಕಾಡಿತು ಎಂಬ ಮಾತು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ, ಮತ್ತೊಂದು ಮಗು ಹೊಂದುವುದು ಬೇಡ ಎಂದು ತೀರ್ವನಿಸಿದ್ದೇವೆ. ಮಗುವನ್ನು ದತ್ತು ಪಡೆಯುವ ಉದ್ದೇಶವಿದೆ. ಮಗ ಜೀವನ್ ನೆನಪು ಮತ್ತು ಆತನ ಹೆಸರು ಅಜರಾಮರವಾಗಲಿ. ಆ ಮೂಲಕ ಬಡ ಕುಟುಂಬಗಳಿಗೆ ನೆರಳು ಕಲ್ಪಿಸಿದ ಪುಣ್ಯ, ಆತ್ಮಸಂತೃಪ್ತಿಯ ಬದುಕು ನಮ್ಮದಾಗಲಿ. ಇಲ್ಲಿ ನೆಲೆಸುವ ಕುಟುಂಬದವರ ಮಕ್ಕಳನ್ನು ನೋಡಿ ನಮ್ಮ ನೋವನ್ನು ಮರೆಯುತ್ತೇವೆ. ನಿವೇಶನ ನೀಡುವುದರ ಹಿಂದೆ ಬೇರೆ ಯಾವುದೇ ಉದ್ದೇಶವಿಲ್ಲ. ದ್ಯಾಮಣ್ಣಜ್ಯೋತಿ ನೀರಲಗಿಸೂರಣಗಿ ದಂಪತಿ
ಗ್ರಾಮದಲ್ಲಿ ವೃದ್ಧರು, ಅಂಗವಿಕಲರು, ಅಸಹಾಯಕರು ಸೇರಿ ನಿವೇಶನ ರಹಿತ ನೂರಾರು ಬಡ ಕುಟುಂಬಗಳಿವೆ. ಎರಡು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ. ನೆಮ್ಮದಿಯ ನಿದ್ರೆಗಾಗಿ ಸ್ವಂತ ಸೂರಿನ ಕನಸನ್ನು ಹೊತ್ತು ಪರದಾಡುತ್ತಿದ್ದಾರೆ. ಅಂತಹ ಕುಟುಂಬಗಳಿಗೆ ನೆರಳು ನೀಡಲು ಗ್ರಾಮದ ನೀರಲಗಿ ದಂಪತಿ ಮೃತ ಪುತ್ರನ ಸ್ಮರಣಾರ್ಥ ಎಕರೆಗೆ 8 ಲಕ್ಷ ರೂ. ಬೆಲೆಬಾಳುವ 2 ಎಕರೆ ಜಮೀನನ್ನು ನಿವೇಶನ ರಹಿತರಿಗೆ ಉಚಿತವಾಗಿ ನೀಡಲು ಮುಂದಾಗಿರುವುದು ಶ್ಲಾಘನೀಯ. ನಾಗರಾಜ ಪೂಜಾರ ಗ್ರಾಮಸ್ಥ