ಬಡವರಿಗೆ ಒಂದು ನ್ಯಾಯ, ದೊಡ್ಡವರಿಗೆ ಒಂದು ನ್ಯಾಯ:ಮಾಜಿ ಶಾಸಕ ಎ.ಟಿ. ರಾಮಸ್ವಾಮಿ

ಬಡವರಿಗೆ ಒಂದು ನ್ಯಾಯ, ದೊಡ್ಡವರಿಗೆ ಒಂದು ನ್ಯಾಯ:ಮಾಜಿ ಶಾಸಕ ಎ.ಟಿ. ರಾಮಸ್ವಾಮಿ
Published on

ಹಾಸನ: ಮಣ್ಣಿನ ಮಕ್ಕಳು ಎಂದು ಹೇಳಿಕೊಂಡು ಬೇನಾಮಿ ಆಸ್ತಿಗಾಗಿ ಚಿತ್ರೆ ಹಿಂಸೆ ನೀಡಿದ್ದಲ್ಲದೆ ಮಹಿಳೆಯ ಗರ್ಭಪಾತಕ್ಕೆ ಕಾರಣವಾಗಿರುವವರ ವಿರುದ್ಧ ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಂತಹ ಕುಟುಂಬದಲ್ಲಿ ಬೇನಾಮಿ ಆಸ್ತಿಗಾಗಿ ಹಲ್ಲೆ ಮಾಡಿದ್ದು ಅಲ್ಲದೆ ಮಹಿಳೆಯ ಗರ್ಭಪಾತಕ್ಕೆ ಕಾರಣವಾಗಿರುವಂತಹ ಪ್ರಕರಣ ನಡೆದಿರುವುದು ದುರಂತ. ಮಾಜಿ ಮುಖ್ಯಮಂತ್ರಿ ಮಾತೃ ಹೃದಯದವರು ಎಂದು ಹೇಳುತ್ತಾರೆ ಆದರೆ ಅವರ ಕುಟುಂಬದಲ್ಲೇ ಒಂದು ಮಹಿಳೆಗೆ ಇಷ್ಟೆಲ್ಲ ಅನ್ಯಾಯವಾಗಿದ್ದು ಒಂದು ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಇದು ಅವರಿಗೆ ಗೊತ್ತಿಲ್ಲವೇ ಎಂದು ಗುರುವಾರ ಸುದ್ದಿಗೋಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಜಿಲ್ಲೆಯಲ್ಲಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಹಲವು ಕೊಲೆ ಪ್ರಕರಣಗಳು ನಡೆದಿದೆ. ಆದರೆ ಈಗ ಬಲಾಡ್ಯರ ಕುಟುಂಬದವರು ಈ ರೀತಿ ದೌರ್ಜನ್ಯ ನಡೆಸುವ ಮೂಲಕ ಜಿಲ್ಲೆಯಲ್ಲಿ ಗುಲಾಮಗಿರಿ ಪದ್ಧತಿಯಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಇವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಕಾರ್ತಿಕನನ್ನು ಪ್ರವಾಸಿ ಮಂದಿರದಲ್ಲಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಕಾನೂನು ರಕ್ಷಿಸಬೇಕಾದ ಪೊಲೀಸರು ಅವರ ಜತೆ ಸೇರಿ ಆತನ ಹೆಂಡತಿಗೆ ಕಿರುಕುಳ ನೀಡಿದ್ದಲ್ಲದೆ ಗರ್ಭಪಾತಕ್ಕೂ ಕಾರಣರಾಗಿದ್ದಾರೆ. ರೈತರೇ ಅಲ್ಲದವರ ಹೆಸರಿಗೆ ಜಮೀನು ನೋಂದಣಿ ಮಾಡಿಸಲಾಗಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ತನಿಖೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಮಹಿಳಾ ಸಂಘಟನೆಗಳು, ಪ್ರಗತಿಪರ ಮತ್ತು ಕನ್ನಡಪರ ಸಂಘಟನೆಗಳೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನ್ಯಾಯ ಕೊಡಿಸುವಲ್ಲಿ ವಿಫಲ
ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಬ್ಬರೂ ಮಹಿಳೆಯರಿದ್ದಾರೆ. ಮತ್ತೊಂದು ಮಹಿಳೆ ತನಗೆ ಆಗಿರುವ ಅನ್ಯಾಯ ಬಗ್ಗೆ ದೂರು ನೀಡಿದರೂ ಅವರು ಸೂಕ್ತ ಕ್ರಮ ಕೈಗೊಳ್ಳಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಸಾಕ್ಷಾೃಧಾರಗಳ ನಾಶ
ಕಾರ್ತಿಕ್ ಮತ್ತು ಆತನ ಪತ್ನಿ ದೂರು ನೀಡಿ ಹಲವು ತಿಂಗಳು ಕಳೆದಿವೆ. ಆದರೆ ಇದರ ಬಗ್ಗೆ ಯಾವುದೇ ತನಿಖೆಯಾಗದೆ ಎಲ್ಲಾ ಸಾಕ್ಷೃಗಳನ್ನು ನಾಶ ಮಾಡಲಾಗಿದೆ. ಜಿಲ್ಲೆಯಲ್ಲಿ ಬಡವರಿಗೆ ಒಂದು ನ್ಯಾಯ ದೊಡ್ಡವರಿಗೆ ಒಂದು ನ್ಯಾಯ ಎಂಬಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ರಾಮಸ್ವಾಮಿ ಕಿಡಿ ಕಾರಿದರು.
ಬೇನಾಮಿ ಆಸ್ತಿ ವರ್ಗಾವಣೆಯಾಗುವ ಸಂದರ್ಭದಲ್ಲಿ ನೋಂದಾವಣಿ ಕಚೇರಿ, ಬ್ಯಾಂಕು, ಐಬಿ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಸಾಕ್ಷೃಗಳು ಇಲ್ಲ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಅಲ್ಲದೆ ಈ ಪ್ರಕರಣವನ್ನು ತನಿಖೆ ನಡೆಸಬೇಕಾದ ಪೊಲೀಸರೇ ಕೊಲೆಪಾತಕರ ಜತೆ ಸೇರಿ ಹುನ್ನಾರ ಮಾಡಿದ್ದಾರೆ. ಈ ಪ್ರಕರಣವನ್ನು ಈಗಾಗಲೇ ಮುಚ್ಚು ಹಾಕಲಾಗಿದೆ. ಆದ್ದರಿಂದ ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಕಣ್ಮುಚ್ಚಿ ಕುಳಿತಿರುವ ಮಹಿಳಾ ಆಯೋಗ
ಮಂಡ್ಯದಲ್ಲಿ ಭ್ರೂಣ ಹತ್ಯೆ ಬಗ್ಗೆ ಮಹಿಳಾ ಆಯೋಗ ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಆದರೆ ಜಿಲ್ಲೆಯಲ್ಲಿ ಮಹಿಳೆ ತನ್ನ ಗರ್ಭಪಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳದೆ ಮಹಿಳಾ ಆಯೋಗ ಕಣ್ಮುಚ್ಚಿ ಕುಳಿತಿದೆ ಎಂದು ಎಟಿಆರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಬೆಂಬಲಿಸಲ್ಲ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು 2019ರಲ್ಲಿ ಮೋದಿ ಪ್ರಧಾನಿಯಾದರೆ ಈ ದೇಶದಲ್ಲೇ ಇರುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಅವರನ್ನೇ ಪ್ರಧಾನಿ ಮಾಡಲು ಅವರ ಜತೆ ಹೋಗುತ್ತಿದ್ದೇವೆ ಎಂದು ಹೇಳಿರುವುದು ನಿಜಕ್ಕೂ ಹಾಸ್ಯಾಸ್ಪದ. ಆದರೆ ಯಾವುದೇ ಕಾರಣಕ್ಕೂ ಈ ಮೈತ್ರಿಗೆ ನನ್ನ ಸಹಮತವಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಅದಕ್ಕೆ ನನ್ನ ಸಂಪೂರ್ಣ ವಿರೋಧವಿರುತ್ತದೆ. ಯಾವುದೇ ಕಾರಣಕ್ಕೂ ಪ್ರಜ್ವಲ್ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ನಾನು ಬಿಜೆಪಿಯಲ್ಲೇ ಇದ್ದೇನೆ. ಮುಂದಿನದ್ದು ಮುಂದೆ ತೀರ್ಮಾನ ಮಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ದೇವೇಗೌಡರು ಸಿದ್ಧಾಂತವನ್ನು ಇಟ್ಟುಕೊಂಡು ರಾಜಕಾರಣ ಮಾಡಿದವರು. ಆದರೆ ಈಗ ಆ ಸಿದ್ಧಾಂತಗಳಿಗೆ ಎಳ್ಳು ನೀರನ್ನು ಅವರ ಕುಟುಂಬದವರೇ ಬಿಟ್ಟಿದ್ದಾರೆ. ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ದೇವೇಗೌಡರು ಕೇವಲ ಉತ್ಸವ ಮೂರ್ತಿಯನ್ನಾಗಿ ಮೆರೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net