

ಹಾವೇರಿ: ಜಿಲ್ಲೆಯ ನಗರ ಪ್ರದೇಶದ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ, ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ಉಚಿತ ಹಾಲು ವಿತರಣೆಗೆ ಶನಿವಾರ ನಗರದಲ್ಲಿ ಚಾಲನೆ ನೀಡಲಾಯಿತು.
ನಗರದ ಇಜಾರಿಲಕಮಾಪುರ, ಕೆರಿಮತ್ತಿಹಳ್ಳಿ ರಸ್ತೆಯಲ್ಲಿ ಶಾಸಕ ನೆಹರು ಓಲೇಕಾರ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹಾಲು ವಿತರಿಸಿದರು.
ಶಾಸಕ ನೆಹರು ಓಲೇಕಾರ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಡ ಜನರಿಗೆ ಲಾಕ್ಡೌನ್ನಿಂದಾಗಿ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ, ಜನತೆಯ ಆರೋಗ್ಯ ದೃಷ್ಟಿಯಿಂದ ಉಚಿತವಾಗಿ ಹಾಲು ವಿತರಿಸಲು ಸೂಚನೆ ನೀಡಿದ್ದಾರೆ. ಧಾರವಾಡ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹೆಚ್ಚುವರಿ 19 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಈ ಹಾಲನ್ನು ಆಯಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿರುವ ನಿರಾಶ್ರಿತರು, ಕೊಳಚೆ ಪ್ರದೇಶದವರಿಗೆ ಹಾಗೂ ಕೂಲಿ ಕಾರ್ವಿುಕರಿಗೆ ಪ್ರತಿದಿನ ಒಂದು ಲೀಟರ್ನಂತೆ ಉಚಿತವಾಗಿ ಏ. 14ರವರೆಗೆ ವಿತರಿಸಲಾಗುವುದು ಎಂದರು.
ನಗರಸಭೆ ಸದಸ್ಯರಾದ ಗಿರೀಶ ತುಪ್ಪದ, ಬಾಬುಸಾಬ ಮೋಮಿನಗಾರ, ಜಗದೀಶ ಮಲಗೋಡ, ತಹಸೀಲ್ದಾರ್ ಶಂಕರ ಜಿ.ಎಸ್., ಪೌರಾಯುಕ್ತ ಬಸವರಾಜ ಜಿದ್ದಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪಿ.ಎನ್. ಹುಬ್ಬಳ್ಳಿ ಇತರರಿದ್ದರು.
ಜಿಲ್ಲೆಯಾದ್ಯಂತ ಶನಿವಾರ ಒಟ್ಟು 5 ಸಾವಿರ ಲೀಟರ್ ಹಾಲನ್ನು ವಿತರಿಸಲಾಯಿತು. ಏ. 14ರವರೆಗೆ ಉಚಿತವಾಗಿ ಹಾಲು ವಿತರಣೆ ನಡೆಯಲಿದ್ದು, ಜಿಲ್ಲೆಯಲ್ಲಿ ನಿರಾಶ್ರಿತರು ಹಾಗೂ ಸ್ಲಂ ಕುಟುಂಬಗಳು ಸೇರಿದಂತೆ 21,190 ಕುಟುಂಬಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ನಗರಗಳಲ್ಲಿ ವಿತರಿಸಲಾಗುತ್ತಿದೆ.