ಬಡವರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ : ಸರ್ಕಾರಿ ನೌಕರರಿಗೆ ಸಂಸದ ಮುನಿಸ್ವಾಮಿ ಸೂಚನೆ, ಸವೋರ್ತ್ತಮ ಸೇವಾ ಪ್ರಶಸ್ತಿ ಪ್ರದಾನ

1
Published on

ಕೋಲಾರ: ಬಡವರು, ಶೋಷಿತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸರ್ಕಾರಿ ನೌಕರರು ಕರ್ತವ್ಯನಿಷ್ಠೆ ತೋರಬೇಕು ಎಂದು ಸಂಸದ ಎಸ್​.ಮುನಿಸ್ವಾಮಿ ಸೂಚಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸವೋರ್ತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ನೌಕರರು ಯಾರ ಮುಲಾಜಿಗೂ ಒಳಗಾಗದೆ ಕೆಲಸ ಮಾಡಬೇಕು. ಕರ್ತವ್ಯ ನಿರ್ವಹಣೆ ಮಾಡುವಾಗ ದರ್ಪ ತೋರದೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ಕಾರಣಕ್ಕೂ ಬಡವರನ್ನು ಕಚೇರಿಗಳಿಗೆ ಅಲೆದಾಡಿಸುವುದು ಬೇಡ ಎಂದು ಹೇಳಿದರು. ಮೇ ಮೊದಲ ವಾರ ನಡೆಯುವ ನೌಕರರ ಕ್ರೀಡಾಕೂಟಕ್ಕೆ ಅಗತ್ಯವಾದ ಟೀ&ಶರ್ಟ್​, ಕ್ಯಾಪ್​ಗಳನ್ನು ಒದಗಿಸಲಾಗುವುದು. ಪ್ರಶಸ್ತಿಗೆ ಆಯ್ಕೆ ಮಾಡುವಾಗ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿಗಳಿಗೆ ತೋರುವ ಮಾನದಂಡದಂತೆ ಇಲ್ಲೂ ಪಾಲಿಸಬೇಕು ಎಂದರು. ಜಿಲ್ಲಾಧಿಕಾರಿ ವೆಂಕಟ್​ರಾಜಾ ಮಾತನಾಡಿ, ದೇಶದ ಪ್ರಥಮ ಗೃಹ ಸಚಿವ ಸರ್ದಾರ್​ ವಲ್ಲಭಭಾಯಿ ಪಟೇಲರ ಸ್ಮರಣೆಯಂತೆ ಸಾರ್ವಜನಿಕ ಸೇವಾ ದಿವಸ್​ ಆಚರಿಸುತ್ತಿದ್ದೇವೆ. ಇದು ಸರ್ಕಾರಿ ನೌಕರರ ದಿನಾಚರಣೆಯಾಗಿದೆ. ನೌಕರರಲ್ಲಿ ಪಾರದರ್ಶಕತೆ, ಕರ್ತವ್ಯನಿಷ್ಠೆ, ಸೇವಾ ಮನೋಭಾವ ಅಗತ್ಯವಾಗಿದೆ. ಹುದ್ದೆ ಮುಖ್ಯವಲ್ಲ, ವಹಿಸಿಕೊಂಡ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ ಸವಾಲುಗಳನ್ನು ಎದುರಿಸಬೇಕು ಎಂದರು. ಜಿಪಂ ಸಿಇಒ ಉಕೇಶ್​ಕುಮಾರ್​ ಮಾತನಾಡಿ, ಜಿಲ್ಲಾಡಳಿತದ ಸಫಲತೆ, ವಿಲತೆಯ ಹಿಂದೆ ನೌಕರರ ಶ್ರಮವಿದೆ. ಅಂದಿನ ಕೆಲಸ ಅಂದೇ ಮುಗಿಸಿದರೆ ಆತ್ಮತೃಪ್ತಿ ಸಿಗುತ್ತದೆ. ಇಂದು ಜನರ ಮನೆಬಾಗಿಲಿಗೆ ಸರ್ಕಾರಿ ಸೇವೆ ತಲುಪಿಸುವ ವ್ಯವಸ್ಥೆ ಇದೆ. ಇದನ್ನು ಸವಾಲಾಗಿ ಸ್ವೀಕರಿಸೋಣ ಎಂದರು. ಕರ್ತವ್ಯನಿಷ್ಠೆ ಮೆರೆದ ನೌಕರರಿಗೆ ಸವೋರ್ತ್ತಮ ಸೇವಾ ಪ್ರಶಸ್ತಿ ನೀಡಲಾಯಿತು. ಕೆಯುಡಿಎ ಅಧ್ಯಕ್ಷ ಓಂಶಕ್ತಿಚಲಪತಿ, ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಸಂಘದ ಗೌರವಾಧ್ಯಕ್ಷ ಎನ್​.ಶ್ರೀನಿವಾಸರೆಡ್ಡಿ, ಖಜಾಂಚಿ ವಿಜಯ್​, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷರಾದ ಎಂ.ನಾಗರಾಜ್​, ಪುರುಷೋತ್ತಮ್​, ಮಂಜುನಾಥ್​, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್​, ಡಾ.ನಾರಾಯಣಸ್ವಾಮಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಮುನೇಗೌಡ, ಭಂಗವಾದಿ ನಾಗರಾಜ್​, ಮುನಿರಾಜು, ಸಂಘದ ಪದಾಧಿಕಾರಿಗಳಾದ ಪ್ರೇಮಾ, ಅನಿಲ್​ ಇತರರಿದ್ದರು.

ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯವು 3ನೇ ಸ್ಥಾನದಲ್ಲಿದೆ. ಇದಕ್ಕೆ ನೌಕರರ ಪರಿಶ್ರಮ ಕಾರಣ. ಸಂಘವು ನೌಕರರ ಹಿತ ರಕ್ಷಣೆಗೆ ಕಂಕಣಬದ್ಧವಾಗಿದೆ. ಷಡಕ್ಷರಿ ಅಧ್ಯಕ್ಷರಾದ ನಂತರ ನೌಕರರಿಗಾಗಿ 58 ಆದೇಶಗಳು ಹೊರಬಂದಿವೆ. ಜಿಲ್ಲೆಯಲ್ಲಿ 16 ಸಾವಿರ ನೌಕರರಿದ್ದು, 2 ದಿನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕಾಯಿತು. 2020-&21 ಹಾಗೂ 2021-&22ನೇ ಸಾಲಿಗೆ ತಲಾ 10 ರಂತೆ 20 ಮಂದಿಯನ್ನು ಸವೋರ್ತ್ತಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಿ.ಸುರೇಶ್​ಬಾಬು, ಜಿಲ್ಲಾಧ್ಯಕ್ಷ, ನೌಕರರ ಸಂಘ

10 ಗಂಟೆಗೆ ಕಾರ್ಯಕ್ರಮ, 11ಗಂಟೆಗೆ ಸಂಸದರಿಗೆ ಆಹ್ವಾನ!: ಹತ್ತೂವರೆ ಗಂಟೆಯ ಕಾರ್ಯಕ್ರಮಕ್ಕೆ ಸಂಸದ ಎಸ್​.ಮುನಿಸ್ವಾಮಿ ಅವರನ್ನು ಜಿಲ್ಲಾಡಳಿತವು ಆಹ್ವಾನಿಸಿರುವುದು ಹನ್ನೊಂದು ಗಂಟೆಗೆ!. ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಜಿಲ್ಲೆಯ ಬಹುತೇಕ ನೌಕರರಿಗೆ ತಲುಪಿಲ್ಲ. ಇದೇ ಕಾರ್ಯಕ್ರಮದಲ್ಲಿ ಇಪ್ಪತ್ತು ನೌಕರರಿಗೆ "ಜಿಲ್ಲಾ ಸವೋರ್ತ್ತಮ ನಾಗರಿಕ ಪ್ರಶಸ್ತಿ' ಕೊಡಲು ನಿಶ್ಚಯಿಸಿದ್ದು, ಬುಧವಾರ ರಾತ್ರಿ ಮತ್ತು ಗುರುವಾರ ಕಾರ್ಯಕ್ರಮ ಪ್ರಾರಂಭವಾಗುವುದಕ್ಕೂ ಮುನ್ನ ವಿವಿಧ ಇಲಾಖೆ ಅಧಿಕಾರಿಗಳು ಮೊಬೈಲ್​ ಮೂಲಕ ಪ್ರಶಸ್ತಿ ಪುರಸತ ನೌಕರರಿಗೆ ಬನ್ನಿ ಪ್ರಶಸ್ತಿ ಕೊಡ್ತೀವಿ ಎಂದು ಕರೆದಿದ್ದಾರೆ. ಎಂಪಿ ಅವರನ್ನು ಕರೆದಂತೆಯೇ ಕೋಲಾರದ ಶಾಸಕರನ್ನೂ ಆಹ್ವಾನಿಸಿರುವುದು ಬೆಳಗ್ಗೆ 11ಗಂಟೆಗೆ. ಹಾಗೆಯೇ, ತಡವಾಗಿ ಆಹ್ವಾನಿಸಿದರೂ ಕಾರ್ಯಕ್ರಮಕ್ಕೆ ಬಂದಿದ್ದ ಎಂಎಲ್​ಸಿ ಗೋವಿಂದರಾಜು ಅವರು ಸಮಾರಂಭ ನಡೆಯುವುದು ಅನುಮಾನ ಎಂಬ ಸುಳಿವು ಸಿಕ್ಕ ನಂತರ ಮುಜುಗರದಿಂದ ವಾಪಸಾದರು. ಈ ಮಧ್ಯೆ ಕಾರ್ಯಕ್ರಮದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಜಿಲ್ಲಾಧಿಕಾರಿ ವೆಂಕಟರಾಜಾ ಮತ್ತು ಜಿಪಂ ಸಿಇಒ ಉಕೇಶ್​ಕುಮಾರ್​ ಬಂದಿದ್ದು, ಕಾರ್ಯಕ್ರಮವು ತಡವಾಗುತ್ತಿದ್ದುದರಿಂದ ಅವರಿಬ್ಬರೂ ರಂಗಮಂದಿರ ಆವರಣದಲ್ಲಿದ್ದ ಕನ್ನಡ ಮತ್ತು ಸಂಸತಿ ಇಲಾಖೆ ಕಚೇರಿಯಲ್ಲಿ ಮೌನಕ್ಕೆ ಶರಣಾಗಿದ್ದರು. ಸಂಘದ ಅಧ್ಯಕ್ಷ ಸುರೇಶಬಾಬು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದ ಆಹ್ವಾನದ ಬಗ್ಗೆ ಅಲ್ಲಿ ಬಂದವರು ಕೇಳುತ್ತಿದ್ದ ಪ್ರಶ್ನೆಗೆ ಉತ್ತರಿಸಲಾಗದೆ ಪೇಚಿಗೆ ಸಿಕ್ಕಿಕೊಂಡಿದ್ದರು. ಕಡೆಗೂ ಸಂಸದ ಎಸ್​.ಮುನಿಸ್ವಾಮಿ ರಂಗಮಂದಿರಕ್ಕೆ ಆಗಮಿಸಿದ ನಂತರ ಕಾರ್ಯಕ್ರಮ ಶುರುವಾಗುವಷ್ಟರಲ್ಲಿ ಮಧ್ಯಾಹ್ನ ಎರಡೂವರೆ ಆಗಿತ್ತು. ಹತ್ತೂವರೆಗೆ ನಿಗದಿಯಾಗಿದ್ದ ಈ ಕಾರ್ಯಕ್ರಮಕ್ಕೆ ಸಂಸದನಾದ ನನಗೇ ಹನ್ನೊಂದು ಗಂಟೆಗೆ ಆಹ್ವಾನ ಬಂದಿದೆ!. ಇಂತಹ ಪರಿಸ್ಥಿತಿ ಪುನರಾವರ್ತನೆ ಆಗಬಾರದು. ಮುಂದಿನ ವರ್ಷ ಸರ್ಕಾರಿ ನೌಕರರ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು' ಎಂದು ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net