ಬಡವರ ಸಬಲತೆಗೆ ಬ್ಯಾಂಕ್ ಹೆಬ್ಬಾಗಿಲಾಗಲಿ

Grahaka
Published on

ಚಿತ್ರದುರ್ಗ: ಬಡವರ ಆರ್ಥಿಕಾಭಿವೃದ್ಧಿ ಚಟುವಟಿಕೆಗೆ ಸಾಲಸೌಲಭ್ಯ ನೀಡುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಹೆಬ್ಬಾಗಿಲಾಗಬೇಕು. ಆಗ ಮಾತ್ರ ದೇಶದಲ್ಲಿ ಪರಿವರ್ತನೆ ಸಾಧ್ಯ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ತರಾಸು ರಂಗಮಂದಿರದಲ್ಲಿ ಬುಧವಾರ ನಡೆದ ಗ್ರಾಹಕ ಸಂಪರ್ಕ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಬಡವರಿಗಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಅಧಿಕಾರಿಗಳು ಆದ್ಯತೆ ಮೇರೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ತೆರಿಗೆ ಹಣ ಬಡವರ ಮನೆ ಬಾಗಿಲಿಗೆ ಕೊಂಡೊಯ್ಯುವ ಸಂಕಲ್ಪ ಎಲ್ಲ ಸರ್ಕಾರಗಳು, ಜನಪ್ರತಿನಿಧಿಗಳು ಮಾಡಬೇಕು. ಪ್ರಧಾನಿ ನರೇಂದ್ರಮೋದಿ ಅವರು ಶೋಷಿತ ವರ್ಗದ 1 ಲಕ್ಷ ಮಂದಿ ಫಲಾನುಭವಿಗಳಿಗೆ ಸಾಲಸೌಲಭ್ಯ ವಿತರಿಸಲು ಪಿಎಂ ಸೂರಜ್ ನ್ಯಾಷನಲ್ ಪೋರ್ಟಲ್ ಮೂಲಕ 660 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಯ ಫಲಾನುಭವಿಗಳಿಗೆ ಇಲಾಖೆಯಿಂದ ಸಾಲಸೌಲಭ್ಯ ಮಂಜೂರಾತಿ ಆದೇಶ ಪ್ರತಿ ಸಾಂಕೇತಿಕವಾಗಿ ವಿತರಿಸಲಾಯಿತು.

ಎಡಿಸಿ ಬಿ.ಟಿ.ಕುಮಾರಸ್ವಾಮಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಕೇಂದ್ರ ಕಚೇರಿ ಜನರಲ್ ಮ್ಯಾನೇಜರ್ ಭಾಗ್ಯರೇಖಾ, ಎನ್‌ಎಸ್‌ಸಿಎಫ್‌ಡಿಸಿ ಸಿಜಿಎಂ ರಮೇಶ್‌ರಾವ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್, ಎನ್‌ಐಸಿ ಅಧಿಕಾರಿ ಕೆಆರ್‌ಕೆ ಶಾಸ್ತ್ರಿ, ದಾವಣಗೆರೆ ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಕೆ.ಶ್ರೀನಿವಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡ ಮೀಸೆ ಮಹಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net