

ಸೊರಬ: ಜನ ಸಾಮಾನ್ಯರ, ಬಡವರ, ದೀನ ದಲಿತರ ಶ್ರೇಯೋಭಿವೃದ್ಧಿಗೆ ಮತ್ತು ಅವರ ಆರ್ಥಿಕ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳು ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಕೆ.ಜಯಶೀಲ ಗೌಡ ಹೇಳಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಜನರಿಗೆ ತಲುಪಿಸಿದಾಗ ಮಾತ್ರ ಸಾರ್ಥಕ್ಯ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದರು. ಗ್ಯಾರಂಟಿಗಳು ಬಹುತೇಕ ಜನರನ್ನು ತಲುಪಿವೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯುವನಿಧಿ ಬಗ್ಗೆ ಅಧಿಕಾರಿಗಳು ಕಾಲೇಜುಗಳಿಗೆ ಲಾನುಭವಿಗಳ ಸಂಖ್ಯೆ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಗ್ಯಾರಂಟಿ ಸಮಿತಿ ಸದಸ್ಯ ಆರ್.ಟಿ.ಮಂಜುನಾಥ್ ಮಾತನಾಡಿ, ಸಚಿವ ಎಸ್.ಮಧು ಬಂಗಾರಪ್ಪ ಅವರು ತಾಲೂಕಿನ ಜನರ ಮತ್ತು ಶಾಲಾ ಕಾಲೇಜು ಮಕ್ಕಳ ಹಿತದೃಷ್ಟಿಯಿಂದ ಅನೇಕ ಮಾರ್ಗಗಳಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಅವುಗಳು ಸರಿಯಾಗಿ ಸಂಚರಿಸುತ್ತಿರುವ ಬಗ್ಗೆ ಸಾರಿಗೆ ಸಿಬ್ಬಂದಿ ನೋಡಿಕೊಳ್ಳಬೇಕು. ಪಡಿತರ ಅಕ್ಕಿ ವಿತರಣೆ ಕೆಲವು ಕೇಂದ್ರಗಳಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಪ್ರತಿ ತಿಂಗಳು 15ರೊಳಗೆ ಪಡಿತರ ವಿತರಿಸಬೇಕು ಎಂದರು. ಮೆಸ್ಕಾಂ ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ನೀರಾಕ್ಷೇಪಣಾ ಪತ್ರ ನೀಡಲು ಅವಕಾಶವಿದ್ದರೆ ನೀಡಬೇಕು. ಇದರಿಂದ ರೈತರು ಮತ್ತು ಇತರೆ ಸೌಲಭ್ಯ ಪಡೆಯುವವರಿಗೆ ಅನುಕೂಲವಾಗಲಿದೆ. ತಲಗಡ್ಡೆ ಭಾಗದಲ್ಲಿ ವಿದ್ಯುತ್ ಗ್ರಿಡ್ ಸ್ಥಾಪನೆ ಮಾಡುವುದರಿಂದ ತಲಗಡ್ಡೆ, ಶಕುನವಳ್ಳಿ, ತಲಗುಂದ, ಕಾತವಳ್ಳಿ ವ್ಯಾಪ್ತಿಯ ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ಸದಸ್ಯ ಮಂಜುನಾಥ್ ಸಭೆಯ ಗಮನಸೆಳೆದರು. ತಾಪಂ ಇಒ ಶಶಿಧರ, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಪ್ರಭಾಕರ ಶಿಗ್ಗಾ, ಸಮಿತಿ ಸದಸ್ಯರಾದ ಪ್ರವೀಣ್, ಸಂತೋಷ್, ಅಭಿಷೇಕ್, ಜಯಶೀಲಪ್ಪ, ಯುವರಾಜ್ ಗೌಡ, ಮಂಜುಳಾ, ವಿನಾಯಕ, ಚಾಂದ್ ಸಾಬ್, ಶಿವಪುತ್ರಪ್ಪ, ಮುಕ್ತಿಯಾರ್ ಬಾಷಾ, ಸಾರಿಗೆ ಇಲಾಖೆಯ ಆರ್.ಕೆ.ನಂದೂರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೋಮಶೇಖರ್, ಮೆಸ್ಕಾಂ ಎಇಇ ಸತ್ಯಪ್ರಕಾಶ್, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಡಾ. ಕಿರಣ್‌ಕುಮಾರ್, ಜಿಲ್ಲಾ ಯುವನಿಧಿ ಕೇಂದ್ರದ ಮಹಾಂತೇಶ್, ಮಮತಾ ಇತರರಿದ್ದರು.
ಗ್ರಾಪಂ ಮಟ್ಟದಲ್ಲಿ ಜಾಗೃತ ಸಮಿತಿಗಳು ಕೇವಲ ಹೆಸರಿಗೆ ಮಾತ್ರ ಇವೆ. ಅವುಗಳು ಯಾವುದೇ ರೀತಿಯ ಸಭೆ ಮತ್ತು ಕ್ರಮಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದುತ್ತಿವೆ. ಅಂತಹ ಸಮಿತಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಎಚ್.ಕೆ.ಜಯಶೀಲ ಗೌಡ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ