

ಹೂವಿನಹಡಗಲಿ: ರಾಜ್ಯದಲ್ಲಿ ದಿನಬಳಕೆ ವಸ್ತುಗಳು ಹಾಗೂ ಇತರ ದರ ಹೆಚ್ಚಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಬಡವರ ಜೀವನಕ್ಕೆ ಕುತ್ತು ತರುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ಹೇಳಿದರು.
ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಬಿಜೆಪಿ ಮಂಡಲದಿಂದ ನಡೆಸಿದ ಪ್ರತಿಭಟನೆಯಲ್ಲಿ ಶನಿವಾರ ಮಾತನಾಡಿದರು. ರಾಜ್ಯದಲ್ಲಿ ನಿರಂತರವಾಗಿ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರ ರಕ್ತ ಹೀರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹುಟ್ಟಿದ ಕೂಸಿನಿಂದ ಮರಣ ಹೊಂದಿದವರ ಪ್ರಮಾಣಪತ್ರ ಪಡೆಯಲು ಈಗ ಹೆಚ್ಚಿನ ಹಣ ನೀಡಬೇಕಾದ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ ಎಂದು ದೂರಿದರು.
ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಈಟಿ ಲಿಂಗರಾಜ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿಗಳ ಹೆಸರಿನಲ್ಲಿ ಜನಸಾಮಾನ್ಯರ ಬದುಕನ್ನು ಸರ್ಕಾರ ಅತಂತ್ರ ಮಾಡಿದೆ. ಇಷ್ಟು ವರ್ಷ ಬಜೆಟ್ ಮಂಡಿಸಿರುವ ಸಿ.ಎಂ.ಸಿದ್ದರಾಮಯ್ಯ ಪ್ರತಿಯೊಬ್ಬ ಪ್ರಜೆಯ ಮೇಲೆ ಸುಮಾರು 1.6 ಲಕ್ಷ ರೂ. ಸಾಲ ಹೊರಿಸಿದ್ದಾರೆ ಎಂದು ಆರೋಪಿಸಿದರು.
ಮಂಡಲ ಅಧ್ಯಕ್ಷ ಪಿ.ಮಲ್ಲಿಕಾರ್ಜುನ, ಅಲ್ಪ ಸಂಖ್ಯಾತರ ಮೋರ್ಚಾ ಜಿಲ್ಲಾಧ್ಯಕ್ಷ ಸಿರಾಜ್ ಬಾವಿಹಳ್ಳಿ, ಜಿಲ್ಲಾ ಕಾರ್ಯದರ್ಶಿ ಭಾಗ್ಯಮ್ಮ, ರೈತಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್, ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಆರ್.ಟಿ.ನಾಗರಾಜ, ಯುವಮೋರ್ಚಾ ಮಂಡಲ ಅಧ್ಯಕ್ಷ ಪುನೀತ್, ಮಂಡಲ ಮಾಜಿ ಅಧ್ಯಕ್ಷ ಬೀರಬ್ಬಿ ಬಸವರಾಜ ಇತರರಿದ್ದರು.