ಬಡವರ ಮಕ್ಕಳಿಗೆ ಅವಕಾಶ ಇಲ್ಲವೇ?; ಪ್ರೀತಂ ಜೆ.ಗೌಡ

ಬಡವರ ಮಕ್ಕಳಿಗೆ ಅವಕಾಶ ಇಲ್ಲವೇ?; ಪ್ರೀತಂ ಜೆ.ಗೌಡ
Published on


ಚನ್ನರಾಯಪಟ್ಟಣ : ಒಂದೇ ಕುಟುಂಬಕ್ಕೆ ಅಥವಾ ಒಬ್ಬನೇ ವ್ಯಕ್ತಿಗೆ ಯಾವಾಗಲೂ ಅಧಿಕಾರವನ್ನು ನೀಡುತ್ತಲೇ ಇದ್ದರೆ ನಿಮ್ಮ ನಮ್ಮಂತ ಬಡವರ ಮಕ್ಕಳಿಗೆ ಅವಕಾಶ ಸಿಗುವುದು ಯಾವಾಗ? ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಪ್ರಶ್ನಿಸಿದರು.


ತಾಲೂಕಿನ ನುಗ್ಗೇಹಳ್ಳಿ ಗ್ರಾಮದಲ್ಲಿ ಶ್ರೀ ವಿನಾಯಕ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಆಳುವ ಹಕ್ಕು ಯಾರೋ ಒಬ್ಬನೇ ವ್ಯಕ್ತಿಗೆ ಮೀಸಲಲ್ಲ ಎಂದರು.


ಪ್ರತಿದಿನ ಸೊಪ್ಪಿನ ಸಾರಿನಲ್ಲಿ ಊಟ ಮಾಡಿದರೆ ರುಚಿಸುವುದಿಲ್ಲ ವಾರದಲ್ಲಿ ಒಂದೆರೆಡು ದಿನ ಬೇರೆ ಸಾಂಬರ್ ಇದ್ದರೆ ಚಂದ ಎನಿಸುತ್ತದೆ. ದಿನವೂ ಸಿಹಿ ತಿನ್ನಲು ಸಾಧ್ಯವಿಲ್ಲ ಹಾಗ್ಗಾಗ್ಗೆ ಹುಳಿ, ಉಪ್ಪು ಹಾಗೂ ಖಾರವಿರುವ ಆಹಾರ ಸೇವನೆ ಬೇಕೇ ಬೇಕು ಎಂದು ತಾಲೂಕಿನ ರಾಜಕೀಯ ಬದಲಾವಣೆ ಬಗ್ಗೆ ಹೋಲಿಕೆ ಮಾಡಿ ಗಮನ ಸೆಳೆದರು.
10 ವರ್ಷ ಶಾಸಕ ಸ್ಥಾನ ನೀಡಿದ್ದೀರಿ, ಅದರ ಹಿಂದಿನ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅಧಿಕಾರ ಉಂಡಿದ್ದಾರೆ. ಇನ್ನು ಅವರೇ ಎಷ್ಟು ದಿನ ಅಧಿಕಾರ ನಡೆಸಬೇಕು. ಬೇರೆ ಇನ್ಯಾರು ಅಧಿಕಾರ ನೋಡುವುದು ನಡೆಸುವುದು ಬೇಡವೇ ಎಂದು ಪರೋಕ್ಷವಾಗಿ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೆ ಟಾಂಗ್ ನೀಡಿದರು.


ಚನ್ನರಾಯಪಟ್ಟಣದ ಜನತೆ ಮುಗ್ಧರು ಅಷ್ಟೇ ಬುದ್ದಿವಂತರೂ ಕೂಡ ಹೌದು. ಆದರೆ ಚಾಣಾಕ್ಷ್ಯ ತನದಿಂದ ನಗು ನಗುತ್ತಲೇ ತನ್ನ ಅಧಿಕಾರ ಉಳಿಸಿಕೊಳ್ಳುತ್ತಿದ್ದಾರೆ ವಿನಹ ಬದಲಾವಣೆ ಎಲ್ಲಿಯೂ ಆಗಿಲ್ಲ. ಬನ್ನಿ ನನ್ನ ಹಾಸನ ಕ್ಷೇತ್ರ ನೋಡಿ ಅಭಿವೃದ್ಧಿ ಅಂದರೆ ಹೇಗಿರುತ್ತೆ ಅನ್ನೋದು ನಿಮಗೇ ಗೊತ್ತಾಗಲಿದೆ ಎಂದು ತಿಳಿಸಿದರು.


ಹಲವು ಬಾರಿಯಿಂದ ತಾಲೂಕಿನಲ್ಲಿ ಒಂದೇ ಪಕ್ಷವನ್ನು ಅಧಿಕಾರಕ್ಕೆ ತರುತಿದ್ದರೂ ನಿರೀಕ್ಷೆಯಂತೆ ಪ್ರಗತಿ ಕಂಡಿಲ್ಲ. ಒಮ್ಮೆ ಬಿಜೆಪಿಗೆ ಅವಕಾಶ ಕೊಟ್ಟು ನೋಡಿ ತಾಲೂಕಿನ ಚಿತ್ರಣವೇ ಬದಲಾಗುತ್ತದೆ. ಹೊಸ ಮುಖ ಎನ್ನುವುದಕ್ಕಿಂದ ಅಭಿವೃದ್ಧಿಯ ಚಿಂತನೆ ಇರುವ ವ್ಯಕ್ತಿಯ ಪಾದಾರ್ಪಣೆ ಅಗತ್ಯವಿದೆ ಎಂದರು.


ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದೆ ಹಾಗಾಗಿ ಜನತೆ ನೆಮ್ಮದಿಯಿಂದ ಬದುಕುತಿದ್ದಾರೆ. ಹಿಂದುತ್ವ ಉಳಿದು ಬೆಳೆಯಬೇಕು. ರಾಜಕೀಯವಾಗಿ ಮಾತನಾಡಲೆಂದೇ ಮತ್ತೊಮ್ಮೆ ನಿಮ್ಮೂರಿಗೆ ಬರುತ್ತೇನೆ. ಎಲ್ಲವನ್ನು ಬದಲಾಯಿಸೋಣ ಒಗ್ಗೂಡಿ ಬನ್ನಿ ಎಂದು ಕರೆ ನೀಡಿದರು.


ಬಿಜೆಪಿ ಯುವ ಮುಖಂಡ ಸಿ.ಆರ್.ಚಿದಾನಂದ್ ಮಾತನಾಡಿ, ತಾಲೂಕಿನ ಏತನೀರಾವರಿ ಯೋಜನೆಗಳಲ್ಲಿ ಬಿಜೆಪಿಗೆ ಸಿಂಹಪಾಲು ಇದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದ ವೇಳೆ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ತಾಲೂಕಿನ ಎಲ್ಲ ನೀರಾವರಿ ಯೋಜನೆಗಳು ಅನುಷ್ಠಾನಗೊಂಡು ಹಣ ಬಿಡುಗಡೆಯಾಗಿ ಕಾಮಗಾರಿ ಕಂಡಿದ್ದು ಇಂದು ಎಲ್ಲ ಕೆರೆ-ಕಟ್ಟೆಗಳು ತುಂಬಿರುವುದು ಸಾಕ್ಷಿಯಾಗಿದೆ ಎಂದರು.


ಹೊಯ್ಸಳ ಯುವಕ ಸಂಘದ ವತಿಯಿಂದ ಪ್ರೀತಂ ಜೆ.ಗೌಡ ಹಾಗೂ ಸಿ.ಆರ್.ಚಿದಾನಂದ್ ಅವರನ್ನು ಅಭಿನಂದಿಸಲಾಯಿತು. ಬಗರ್ ಹುಕ್ಕುಂ ಸಮಿತಿಯ ಸದಸ್ಯೆ ಛಾಯಾಕೃಷ್ಣ, ಪ್ರಮುಖರಾದ ಕೃಷ್ಣಮೂರ್ತಿ, ನವಿಲೆ ನಾಗೇಂದ್ರ, ದಿಡಗ ಬಸವರಾಜ್, ಪ್ರಸನ್ನ, ಲೋಕೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net