

ಚಿತ್ರದುರ್ಗ: ಸರ್ಕಾರಗಳು ಬಡವರಿಗೆ ರೂಪಿಸಿರುವ ಸಹಾಯಧನದೊಂದಿಗೆ ಸಾಲ ನೀಡುವ ವಿವಿಧ ಯೋಜನೆಗಳ ಜಾರಿಗೆ ನಿರ್ಲಕ್ಷ್ಯ ತೋರುವ ಬ್ಯಾಂಕ್ ಅಧಿಕಾರಿಗಳ ನಡೆ ವಿರುದ್ಧ ಸಂಸದ ಗೋವಿಂದ ಎಂ.ಕಾರಜೋಳ ಗರಂ ಆದರು.
ಜಿಪಂದಲ್ಲಿ ಗುರುವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಪ್ರಾಯೋಜಿತ ಯಾವುದೇ ಯೋಜನೆಗಳಡಿ ನಿಗದಿತ ಗುರಿ ಸಾಧಿಸಿಲ್ಲ. ಬಡವರ ಪರ ಕೆಲಸ ಮಾಡಲು ಯಾಕಿಷ್ಟು ತಾತ್ಸಾರ? ಕುರಿಗಾಹಿಗಳಿಗೆ ಕೊಡುವ ನಬಾರ್ಡ್ ಸಾಲ ಸೌಲಭ್ಯದಲ್ಲೂ ಹಿನ್ನಡೆಯಾಗಿದೆ. ಬಡವರ ಸಾಲಕ್ಕೆ ಆಧಾರ ಕೇಳುವ ನೀವು, ದೇಶ ಬಿಟ್ಟು ಓಡಿ ಹೋಗುವ ಉದ್ದಿಮೆಗಳಿಗೆ ಸಾವಿರಾರು ಕೋಟಿ ರೂ. ಸಾಲ ಕೊಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.
ಸ್ವ-ಸಹಾಯ ಗುಂಪುಗಳಿಗೆ ಉದ್ದಿಮೆ ಸ್ಥಾಪಿಸಲು ಪ್ರೇರೇಪಿಸುವಂತೆ ಸಲಹೆ ನೀಡಿದರು. ಜಿಲ್ಲೆಯಲ್ಲಿ 10,700 ಸ್ವ-ಸಹಾಯ ಗುಂಪುಗಳಿದ್ದು, ಪ್ರಸಕ್ತ ಸಾಲಿನಲ್ಲಿ 2340 ಗುಂಪುಗಳಿಗೆ ಸಾಲ ವಿತರಿಸುವ ಗುರಿ ಇದೆ ಎಂದು ಲೀಡ್‌ಬ್ಯಾಂಕ್ ಮ್ಯಾನೇಜರ್ ಸಿ.ಟಿ. ಕುಮಾರ್‌ಬಾಬು ತಿಳಿಸಿದರು.
ಬೆಳೆ ವಿಮೆ ಪಾವತಿಗೆ ನ. 30ರವರೆಗೆ ಅವಕಾಶವಿದೆ. ಜಿಲ್ಲೆಯಲ್ಲಿ 2018-19ನೇ ಸಾಲಿನಿಂದ 2023-24ನೇ ಸಾಲಿನವರೆಗೆ 514 ರೈತ ರಿಗೆ ತೋಟಗಾರಿಕೆ ಬೆಳೆ ವಿಮೆ ಪಾವತಿ ಬಾಕಿಯಿದೆ. ನ. 30ರ ಒಳಗೆ ರೈತರ ಖಾತೆಗೆ ಜಮಾ ಆಗದಿದ್ದರೆ ಹಣ ಹಿಂದಕ್ಕೆ ಹೋಗಲಿದ್ದು, ರೈತರಿಗೆ ಅನ್ಯಾಯವಾದರೆ ಸಹಿಸಲಾಗದು.
ಪಿ.ಎಂ. ಸ್ವ-ನಿಧಿ, ವಿಶ್ವಕರ್ಮ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ನೆರವು ನೀಡಬೇಕು. ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷೃ ವಹಿಸಿದರೆ ಕಠಿಣ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದೆಂದು ಬ್ಯಾಂಕ್ ಅಧಿಕಾರಿಗಳನ್ನು ಎಚ್ಚರಿಸಿದರು. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಜೀವನ್ ಬಿಮಾ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಅನುಷ್ಠಾನ ಕುರಿತೂ ಅಸಮಾಧಾನ ವ್ಯಕ್ತಪಡಿಸಿದರು.
ಸಾಲ ಮಂಜೂರಾಗುವ ಫಲಾನುಭವಿಗೆ ಠೇವಣಿ ಇಡುವಂತೆ ಆಗ್ರಹಿಸುವುದು ಸರಿಯಲ್ಲವೆಂದು ಎಂಎಲ್‌ಸಿ ಕೆ.ಎಸ್.ನವೀನ್ ಅಸಮಾಧಾನ ವ್ಯಕ್ತಪಡಿಸಿದರು. ಫಲಾನುಭವಿಗಳಿಗೆ ಸೌಲಭ್ಯ ಒದಗಿಸದೆ ಕಥೆ ಹೇಳಿದರೆ, ವಿವಿಧ ಬ್ಯಾಂಕ್‌ಗಳಲ್ಲಿರುವ ಡೆಪಾಸಿಟ್ ಹಿಂಪಡೆಯುವುದಾಗಿ ಡಿಸಿ ಟಿ. ವೆಂಕಟೇಶ್ ಎಚ್ಚರಿಸಿದರು.
ಜಿಲ್ಲೆಯಲ್ಲಿ ಹಲವು ಇಲಾಖೆಗಳಲ್ಲಿ ಕ್ಲೇಮ್ ಮಾಡದಿರುವ 93 ಬ್ಯಾಂಕ್ ಖಾತೆಗಳ ವಿಲೇಗೆ ಕ್ರಮ ವಹಿಸುವುದಾಗಿ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು. ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಆರ್‌ಬಿಐ ಎಜಿಎಂ ಅರುಣ್‌ಕುಮಾರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಇತರರು ಇದ್ದರು.
...