

ಕೂಡ್ಲಿಗಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಅದಕ್ಕೆ ಪೂರಕವಾಗಿ ಅಧಿಕಾರಿಗಳು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಕಾರ್ಮಿಕ ರಾಜಪ್ಪ ಮೃತರಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರದ ಆದೇಶ ಪತ್ರವನ್ನು ಪತ್ನಿಗೆ ನೀಡಿ ಶನಿವಾರ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ನಾಡಿನ ಬಡ ಜನರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ ಪಟ್ಟಣದ ಇಬ್ಬರು ಬಡ ಕಾರ್ಮಿಕರು ಮೃತಪಟ್ಟಿದ್ದಾರೆ. ಕುಟುಂಬದ ಆಧಾರ ಸ್ತಂಭವನ್ನೂ ಕಳೆದುಕೊಂಡ ಮನೆಯವರು ಕಣ್ಣೀರಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರಕ ದಾಖಲೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಕೊಡಿಸಿ ಕುಟುಂಬಕ್ಕೆ ನೆರವಾಗಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಪರಿಹಾರ ನಿಧಿ ಹಣ ಮೃತರ ಪತ್ನಿ ಖಾತೆಗೆ ಜಮೆಯಾಗಿದ್ದು, ಮಕ್ಕಳ ಶಿಕ್ಷಣಕ್ಕಾಗಿ ಬಳಸಬೇಕು. ಇದರಿಂದ ಮಕ್ಕಳ ಭವಿಷ್ಯ ಬೆಳಗಲಿದೆ ಎಂದು ತಿಳಿಸಿದರು. ಸಿಡಿಲು ಬಡಿದು ಮೃತಪಟ್ಟವರು ಹಾಗೂ ಕರಡಿ ದಾಳಿಯಿಂದ ನಲುಗಿದವರಿಗೂ ಸರ್ಕಾರದಿಂದ ಪರಿಹಾರ ಒದಗಿಸಲಾಗಿದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಆಲಸ್ಯ ತೋರದೆ ಬಡ ಜನರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸಿ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.