

ಬೇಲೂರು: ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಜೆಡಿಎಸ್ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಮಕ್ಕಳಿಗೆ ನೆರವಾಗುವುದು ಹಾಗೂ ಬಡವರ ಕಷ್ಟ ನಿವಾರಣೆ ಮಾಡುವುದೇ ನನ್ನ ಧ್ಯೇಯವಾಗಿದ್ದು, ಅದಕ್ಕಾಗಿ ಎಲ್ಲರೂ ನಮಗೆ ಶಕ್ತಿ ತುಂಬಬೇಕು. ಲೂಟಿ ಹೊಡೆಯುವ ಪಕ್ಷಗಳನ್ನು ಧಿಕ್ಕರಿಸಿ, ಪ್ರಾದೇಶಿಕ ಪಕ್ಷಕ್ಕೆ ಶಕ್ತಿ ನೀಡಬೇಕು. ಆರೋಗ್ಯ ಸಮಸ್ಯೆ ಬದಿಗಿಟ್ಟು ಪಂಚರತ್ನ ರಥಯಾತ್ರೆ ಮೂಲಕ ರಾಜ್ಯದಲ್ಲಿ ಸಂಚರಿಸಿ ಹೋರಾಟ ಮಾಡುತ್ತಿದ್ದೇನೆ ಎಂದರು.
ಬಡವರು ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಕೇಂದ್ರಸ್ಥಾನದಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಪಬ್ಲಿಕ್ ಶಾಲೆ, 30 ಹಾಸಿಗೆಗಳ ಆಸ್ಪತ್ರೆ ತೆರೆಯಲಾಗುವುದು. ರೈತರಿಗೆ ಒಂದು ಎಕರೆಗೆ ಬಿತ್ತನೆ ಬೀಜ, ರಸಗೊಬ್ಬರ ಕೊಳ್ಳಲು ಆರ್ಥಿಕ ನೆರವು ನೀಡಲಾಗುವುದು. ಆಲೂಗಡ್ಡೆ ಮಾರಾಟಕ್ಕೆ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗುವುದು. ರೈತರು ಸಾಲಗಾರರಾಗಬಾರದು, ಆತ್ಮಹತ್ಯೆಗೆ ಶರಣಾಗಬಾರದು ಎಂಬ ಆಶಯದೊಂದಿಗೆ ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಾಲಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಸರ್ಕಾರ 5.65 ಲಕ್ಷ ಕೋಟಿ ರೂ. ಸಾಲ ಮಾಡಿ ರಾಜ್ಯದ ಜನತೆಯ ಮೇಲೆ ಹೊರೆ ಹೊರಿಸಿದೆ. ಹೀಗಾಗಿ ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಬೇಲೂರು ಕ್ಷೇತ್ರದಲ್ಲಿ ಹಿಂದಿನ 10 ವರ್ಷ ಕಾಂಗ್ರೆಸ್ ಆಡಳಿತವಿತ್ತು. ಆದರೆ ಅವರು ಏನು ಕೆಲಸ ಮಾಡಿದ್ದರು ಎಂಬುದನ್ನು ನೋಡಿದ್ದೇವೆ. ಅಂತೆಯೆ, ಕಳೆದ ನಾಲ್ಕೂವರೆ ವರ್ಷದಲ್ಲಿ ನಾವು ಏನು ಮಾಡಿದ್ದೇವೆ ಎಂಬುದೂ ಜನರಿಗೆ ಗೊತ್ತಿದೆ. ನಾವು ಹಣ, ಹೆಂಡ ಹಂಚೋದಿಲ್ಲ, ಕೆಲಸ ಮಾಡಿ ಮತ ಕೇಳ್ತೇವೆ. ಕೇವಲ ಒಂದು ಬಾರಿ ಗೆಲ್ಲಿಸಿದ್ದಕ್ಕೆ ಅಭಿವೃದ್ಧಿ ಮಾಡಿದ್ದೇವೆ. ಬೇಲೂರಿನಲ್ಲಿ ಮತ್ತೆ ಜೆಡಿಎಸ್ ಅಭ್ಯರ್ಥಿ ಲಿಂಗೇಶ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಿಜೆಪಿಯವರು ತಾಲೂಕಿನಲ್ಲಿ ಸೀರೆ, ಹೆಂಡ ಹಂಚುತ್ತಿದ್ದಾರೆ. ನಮ್ಮ ಯುವಕರಿಗೆ ಅವರ ತಾಯಂದಿರಿಗೆ, ಪತ್ನಿಗೆ, ಸಹೋದರಿಯರಿಗೆ ಸೀರೆ ಕೊಡಿಸೋ ಶಕ್ತಿ ಇದೆ. ಬಿಜೆಪಿಯವರು ದುಡ್ಡಿನ ಮೂಲಕ ಹೋಗುತ್ತಿದ್ದಾರೆ. ನಾವು ಕೆಲಸ ಮಾಡುವ ಮೂಲಕ ಹೋಗುತಿದ್ದೇವೆ. ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕೆಂದರೆ ಬೇಲೂರಿನಲ್ಲಿ ಲಿಂಗೇಶ್ ಅವರು ಗೆಲ್ಲಬೇಕು. ಜೆಡಿಎಸ್‌ಗೆ ಮತ ಹಾಕಿದ್ರೆ ಕುಮಾರಸ್ವಾಮಿ ಸಿಎಂ ಆಗ್ತಾರೆ, ಅವರು ಸಿಎಂ ಆದ್ರೆ ರೈತರು ಸಿಎಂ ಆದಂತೆ. ರೈತರ ಮೊಗದಲ್ಲಿ ನಗು ತರಿಸಬೇಕು ಅನ್ನೋದು ಕುಮಾರಸ್ವಾಮಿ ಅವರ ಉದ್ದೇಶ. ಅವರಿಗೆ ಅಧಿಕಾರದ ಆಸೆ ಇಲ್ಲ, ರೈತರ ಬಗೆಗಿನ ಕಾಳಜಿ ಇದೆ ಎಂದರು.
ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ರಾಮೇಗೌಡ, ಎಸ್.ಎಲ್.ಬೋಜೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ತೋ.ಚ. ಅನಂತಸುಬ್ಬರಾಯ, ಜಿಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ, ಇಂದಿರಾ, ಮಾಜಿ ಸದಸ್ಯೆ ಲತಾ ಮಂಜೇಶ್ವರಿ, ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ.ಎ.ನಾಗರಾಜ್, ತಾಪಂ ಮಾಜಿ ಅಧ್ಯಕ್ಷ ಅಬ್ದುಲ್ ಶುಭಾನ್, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಮಹೇಶ್, ಮುಖಂಡರಾದ ಸೌಮ್ಯಾ, ಶ್ರೀನಿಧಿ, ಭಾರತಿ, ಬಲ್ಲೇನಹಳ್ಳಿ ರವಿ, ಮಹದೇವ್, ವತ್ಸ ಇತರರಿದ್ದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಬೇಲೂರು ತಾಲೂಕಿನಲ್ಲಿ ಇದು ಐತಿಹಾಸಿಕ ಕಾರ್ಯಕ್ರಮ. ಬೇಲೂರು ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆ ಹೆಚ್ಚು. ಯಗಚಿ, ಹೇಮಾವತಿ ಡ್ಯಾಂ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ದೇವೇಗೌಡರು ಹಲವು ಕೊಡುಗೆ ಕೊಟ್ಟಿದ್ದಾರೆ. ಕಡೂರು-ಚಿಕ್ಕಮಗಳೂರು ರೈಲ್ವೆ ಮಾರ್ಗ ಮಾಡಲು ದೇವೇಗೌಡರು ಬರಬೇಕಾಯ್ತು. ಬಿಜೆಪಿಯವರಿಗೆ ಮಾನ ಮಾರ್ಯಾದೆ ಇಲ್ಲದೆ ನಾವು ಮಾಡಿದ ಕೆಲಸಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ನಾನು ಮಾಡಿದ ಕೆಲಸಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಇನ್ನೂ ಆಸ್ಪತ್ರೆಯ ಕೆಲಸವೇ ಮುಗಿದಿಲ್ಲ ಆಗಲೇ ಉದ್ಘಾಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಹೆಣ್ಮಕ್ಕಳಿಗೆ ನೀಡಿರುವ ಕೊಡುಗೆ ಏನು ಅಂದ್ರೆ ಅದು ಸಿಎಲ್-7 ಮದ್ಯದಂಗಡಿ. ಇವು ಎಲ್ಲ ಕಡೆ ನಾಯಿಕೊಡೆಗಳಂತೆ ಹುಟ್ಟುವಂತೆ ಮಾಡಿದ್ದಾರೆ. ಅದರಲ್ಲೂ ಹಾಸನ ಜಿಲ್ಲೆಗೆ ಹೆಚ್ಚು ಸಿಎಲ್-7 ಕೊಟ್ಟಿದ್ದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಜೆಡಿಎಸ್ ಮುಗಿಸಲು ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ. ಇವರೆಡು ಕಮಿಷನ್ ಪಡೆಯುವ ಪಕ್ಷಗಳು. ಆದರೆ ಯಾರಾದ್ರೂ ಕುಮಾರಸ್ವಾಮಿ, ರೇವಣ್ಣ ಪಸೆರ್ಂಟೇಜ್ ತೆಗೆದುಕೊಂಡಿದ್ದಾರೆ ಅಂತ ಹೇಳಲಿ ಎಂದು ಸವಾಲು ಹಾಕಿದರು..