

ಬೈಲಹೊಂಗಲ: ಬಡವರ ಬದುಕಿನಲ್ಲಿ ಆಶಾಕಿರಣ ಮೂಡಿಸಿದವರು ದಿ. ಡಿ.ದೇವರಾಜ ಅರಸು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಬೈಪಾಸ್ ರಸ್ತೆಯ ಡಿ.ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ, ತಾಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದದಲ್ಲಿ ಮಾತನಾಡಿದರು.
ಅರಸು ಹಿಂದುಳಿದ ವರ್ಗದವರ ಧ್ವನಿಯಾಗಿದ್ದವರು. ಎಲ್ಲರಿಗೂ ಸಮಬಾಳು ಸಮಪಾಲು ನೀಡುವ ಸಲುವಾಗಿ ಅರಸು ಉಳುವವನೇ ಭೂ ಒಡೆಯ ಕಾಯ್ದೆ ಜಾರಿಗೆ ತಂದು ಬಡವರಿಗೆ ಭೂ ಮಾಲೀಕತ್ವ ನೀಡಿದರು.
ಸೂರು ಇಲ್ಲದವರಿಗೆ ಸೂರು ಒದಗಿಸಿದರು. ಹಿಂದುಳಿದ ವರ್ಗಗಳ ನಿರ್ದೇಶನಾಲಯ ಸಹ ಜಾರಿಗೆ ತಂದರು. ಎಂದು ಸ್ಮರಿಸಿದರು. ಕೆಆರ್‌ಸಿಇಎಸ್ ಮಹಾವಿದ್ಯಾಲಯದ ಪ್ರೊ.ಬಿ.ಎಸ್.ಮುದೆನ್ನವರ ಉಪನ್ಯಾಸ ನೀಡಿದರು.
ಅರಸು ಭಾವಚಿತ್ರ ಮೆರವಣಿಗೆ ಪುರಸಭೆಯಿಂದ ಸಾಗಿ ಬೆಳಗಾವಿ ರಸ್ತೆ , ಎಪಿಎಂಸಿ, ಬೈಪಾಸ್ ಮಾರ್ಗವಾಗಿ ಸಮಾರಂಭದ ವೇದಿಕೆಗೆ ತಲುಪಿತು. ವಿವಿಧ ವಾದ್ಯಮೇಳಗಳು, ಕಲಾತಂಡಗಳು ಮೆರವಣಿಗೆಗೆ ಕಳೆತಂದವು. ವಸತಿ ನಿಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಕ್ರೀಡಾ ಸಾಧಕರಿಗೆ ಸತ್ಕರಿಸಲಾಯಿತು. ತಹಸೀಲ್ದಾರ್ ಸಚ್ಚಿದಾನಂದ ಕುಚನೂರ, ತಾಪಂ ಇಒ ಸುಭಾಷ ಸಂಪಗಾಂವಿ, ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಾಂತಾ ಮರಿಗೌಡರ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ಕಲಾವತಿ ದೇಶನೂರ, ಅಧಿಕಾರಿಗಳಾದ ಬಸವರಾಜ ದಳವಾಯಿ, ಬಿ.ಎನ್.ಕಸಾಳೆ, ರುದ್ರಪ್ಪ ನಿಂಗನ್ನವರ, ಲಲಿತಾ ಗೊರಗುದ್ದಿ, ಬಸವರಾಜ ಭರಮನ್ನವರ, ಸುರೇಶ ಕೋಟಗಿ, ಪವನ ಬೋಳೆತ್ತಿನ, ಡಿ.ಪಿ. ಹಜೇರಿ, ಎನ್.ಎಸ್. ಸಾಬಣ್ಣವರ, ಸಹದೇವ ಸುಂಕದ ಇತರರಿದ್ದರು.