

ಬೀದರ್: ಬಹುಜನ ಹಿತಾಯ, ಬಹುಜನ ಸುಖಾಯ ದೃಷ್ಟಿಯಿಂದ ನಗರದಲ್ಲಿ ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆ ತೆರೆಯಲಾಗಿದೆ. ಬಡ ರೋಗಿಗಳಿಗೆ ವಿಶೇಷ ಕೊಠಡಿ, ಔಷಧಾಲಯ ಹಾಗೂ ಉತ್ತಮ ಸೌಲಭ್ಯ ಒದಗಿಸುವುದೇ ಆಸ್ಪತ್ರೆ ಧ್ಯೇಯವಿದೆ ಎಂದು ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆ ಅಧ್ಯಕ್ಷರಾದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆ, ಎನ್.ಕೆ .ಜಾಬಶೆಟ್ಟಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಸಿದ್ಧ ಸ್ವರ್ಣಪ್ರಾಶನ, ಪುಂಸವನ ಕರ್ಮ ಹಾಗೂ ವಿಶೇಷ ಕೊಠಡಿ, ಔಷಧಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಹಾಗೂ ಮಹಿಳೆಯರ ಆರೋಗ್ಯದ ಹಿತದೃಷ್ಟಿಯಿಂದ ಉಚಿತವಾಗಿ ಸಿದ್ಧ ಸ್ವರ್ಣಪ್ರಾಶನ, ಪುಂಸವನ ಕರ್ಮ ಉಚಿತ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಂಸ್ಥೆ ನಷ್ಟದಲ್ಲಿ ನಡೆಯುತ್ತಿದ್ದರೂ ಬಡವರ ಆರೋಗ್ಯ ಹಿತವನ್ನೇ ಸಂಸ್ಥೆಯ ಮೂಲ ಗುರಿಯಾಗಿಸಿಕೊಂಡು ಕೆಲಸ ಮಾಡಲಾಗುತ್ತಿದೆ. ಎಲ್ಲರಲ್ಲೂ ಕಾಯಕ ನಿಷ್ಠೆ, ಪ್ರಾಮಾಣಿಕತೆ ಇದ್ದಾಗ ಮಾತ್ರ ಸಂಸ್ಥೆ ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ಹೇಳಿದರು.
ಆಸ್ಪತ್ರೆ ಪ್ರಾಂಶುಪಾಲ ಡಾ.ಎ.ಆರ್.ವಿ.ಮೂರ್ತಿ ಮಾತನಾಡಿ, ಆಯುರ್ವೇದ ಶಾಸ್ತ್ರದಲ್ಲಿ ಹೇಳಿದಂತೆ ಸ್ವರ್ಣ ಪ್ರಾಶನ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಯ ಒಳ ರೋಗಿಗಳಿಗೆ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಆಸ್ಪತ್ರೆ ಸಹ ಕಾರ್ಯದರ್ಶಿ ಬಿ.ಜಿ.ಶೆಟಕಾರ, ಸದಸ್ಯರಾದ ಶಿವಶರಣಪ್ಪ ಸಾವಳಗಿ, ಮಡಿವಾಳಪ್ಪ ಗಂಗಶೆಟ್ಟಿ ಇತರರಿದ್ದರು. ಶೈಲಜಾ ನಿರೂಪಣೆ ಮಾಡಿದರು. ಡಾ. ಬ್ರಹ್ಮಾನಂದ ಸ್ವಾಮಿ ವಂದಿಸಿದರು.