

ಚಿತ್ತಾಪುರ: ಕವಿತೆ, ಪುಸ್ತಕ ಬರೆದು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯವಾಗಲು ಬಡತನವೇ ಪ್ರೇರಣೆಯಾಗಿದೆ ಎಂದು ಚಿತ್ತಾಪುರ ತಾಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಲಿಂಗಪ್ಪ ಮಲ್ಕನ್ ಹೇಳಿದರು.
ಪಟ್ಟಣದ ಅವರ ಮನೆಯಲ್ಲಿ ತಾಲೂಕು ಕಸಾಪ ಸರ್ವ ಪದಾಧಿಕಾರಿಗಳು ಶುಕ್ರವಾರ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನವರು ನನ್ನ ಸಾಹಿತ್ಯ ಸೇವೆಯನ್ನು ಗುರುತಿಸಿ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸಾಮಾಜಿಕ ನ್ಯಾಯ ಕಲ್ಪಿಸಿದೆ ಹಾಗೂ ಸಂತಸ ತಂದಿದೆ ಎಂದರು.
ತಾಲೂಕಿನಲ್ಲಿ ಸಾಹಿತ್ಯದ ಅಭಿರುಚಿವಿದೆ. ಸಾಹಿತ್ಯ ಎಲ್ಲ ಕಡೆ ಪಸರಿಸಬೇಕು. ಸಾಹಿತ್ಯದ ಅಭಿವೃದ್ಧಿಯಿಂದ ಜನರಲ್ಲಿ ಶಾಂತಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿ ರಾಜ್ಯ, ದೇಶ ಬಲಿಷ್ಠವಾಗಲಿದೆ. ಸಮ್ಮೇಳನ ಅರ್ಥಪೂರ್ಣವಾಗಿ ನಡೆದು ಕನ್ನಡ ನಾಡು ಸಮೃದ್ಧಿಯತ್ತ ಸಾಗಬೇಕು. ಸಾಹಿತಿಗಳನ್ನು ಗುರುತಿಸುವ ಕೆಲಸ ನಿರಂತರ ನಡೆಯಲಿ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಕಸಾಪ ಮಾಜಿ ಅಧ್ಯಕ್ಷ ನಾಗಯ್ಯಸ್ವಾಮಿ ಅಲ್ಲೂರ, ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಮುಡಬೂಳಕರ್ ಮಾತನಾಡಿದರು.
ಗೌರವ ಕೋಶಾಧ್ಯಕ್ಷ ವೀರಣ್ಣ ಸುಲ್ತಾನಪುರ, ಮಹ್ಮದ್ ಇಬ್ರಾಹಿಮ್, ನರಸಿಂಹ ಆಲಮೇಲಕರ್, ಬಸಪ್ಪ ಯಂಬತ್ತನಾಳ, ದೇವಿಂದ್ರ ಕುಮಸಿ, ರಮೇಶ ಬಟಗೇರಿ, ಚಂದ್ರಶೇಖರ ಬಳ್ಳಾ, ರಾಮಣ್ಣ ಡೋಣಗಾಂವ, ವೀರಭದ್ರಪ್ಪ ಗುರುಮಠಕಲ್, ಶ್ರೀನಿವಾಸ ಜಗಲಿಮನಿ, ಪೂಜಾ ಭಂಕಲಗಿ, ಅನ್ನಪೂರ್ಣ ಕಟ್ಟಿಮನಿ ಇತರರಿದ್ದರು.
ಗೌರವ ಕಾರ್ಯದರ್ಶಿ ಜಗದೇವ ದಿಗ್ಗಾಂವಕರ್ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಣೆ ಮಾಡಿದರು. ವೆಂಕಟೇಶ ಬಳಿಚಕ್ರ ವಂದಿಸಿದರು.
ಸಮ್ಮೇಳನಾಧ್ಯಕ್ಷ ಲಿಂಗಪ್ಪ ಮಲ್ಕನ್ ಅವರನ್ನು ಸನ್ಮಾನಿಸಿ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.