

ದೇವನಹಳ್ಳಿ: ದೇಶದಲ್ಲಿ ಹೆಚ್ಚುತ್ತಿರುವ ಬಡತನದಿಂದಲೇ ಬಾಲ ಕಾರ್ಮಿಕ ಪದ್ಧತಿಗೆ ಮುಖ್ಯ ಕಾರಣವಾಗಿದೆ ಎಂದು ದೇವನಹಳ್ಳಿಯ ಪ್ರಧಾನ ಸಿವಿಲ್ ನ್ಯಾಯಾಲಯದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿರಾದರ್ ಎನ್. ದೇವೇಂದ್ರಪ್ಪ ಬೇಸರಿಸಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದಲ್ಲಿ ಮಾತನಾಡಿದರು.
ಮಕ್ಕಳಿಗೆ ಭವಿಷ್ಯ ರೂಪಿಸಲು ಉತ್ತಮ ಶಿಕ್ಷಣ ನೀಡಬೇಕು. ಸಾರ್ವಜನಿಕ ಕ್ಷೇತ್ರದಲ್ಲಿ ಬಾಲಕಾರ್ಮಿಕರ ಬಗ್ಗೆ ಅರಿವು ಮೂಡಿಸುವುದು ಅಗತ್ಯವಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲ ಕಾರ್ಮಿಕರು ಕಂಡುಬಂದಲ್ಲಿ ತಕ್ಷಣ 1098ಕ್ಕೆ ಕರೆ ಮಾಡಿ ತಿಳಿಸಬೇಕು ಎಂದರು.
ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕೆ. ಮದುಸೂಧನ್ ಮಾತನಾಡಿ, ಸಾರ್ವಜನಿಕರ ಸಹಕಾರದಿಂದ ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬಹುದು. ಇಂತಹ ಅಭಿಯಾನಕ್ಕೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹೋಟೆಲ್, ಬೇಕರಿ, ಟೀ ಅಂಗಡಿ, ಸಣ್ಣ ಉದ್ದಿಮೆಗಳ ಮಾಲೀಕರನ್ನು ಆಹ್ವಾನಿಸಿ ಕಾರ್ಯಕ್ರಮ ರೂಪಿಸಬೇಕು ಎಂದರು.
ಸರ್ಕಾರ ಬಡವರಿಗೆ ಅನೇಕ ಸವಲತ್ತು ನೀಡುತ್ತಿದ್ದು, ಪಾಲಕರು ಸದುಪಯೋಗ ಪಡಿಸಿಕೊಂಡು, ಮಕ್ಕಳಿಂದ ದುಡಿಸಿಕೊಳ್ಳುವ ಬದಲು ಶಿಕ್ಷಣ ಕೊಡಿಸಬೇಕು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮು ಮಲ್ಲಯ್ಯ ಮಾತನಾಡಿ, ಮಕ್ಕಳಿಗೆ ಸಶಕ್ತ ಹಾಗೂ ಉತ್ತಮ ಸಮಾಜ ಕಟ್ಟುವ ಶಿಕ್ಷಣ ನೀಡಬೇಕು. ಪಾಲಕರು ದುಶ್ಚಟಗಳಿಗೆ ಬಲಿಯಾಗುವ ಕಾರಣ ಕುಟುಂಬ ನಿರ್ವಹಣೆಗೆ ಮಕ್ಕಳು ಚಿಕ್ಕವಯಸ್ಸಿನಲ್ಲಿ ದುಡಿಯಲು ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಎಚ್ಚೆತ್ತು ಜಾಗೃತಿ ಮೂಡಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಲಕ್ಷ್ಮೀ ಪ್ರಸನ್ನ , ಜಿಲ್ಲಾ ಕಾರ್ಮಿಕ ಉಪವಿಭಾಗದ ಅಧಿಕಾರಿ ಎಚ್.ಆರ್. ನಾಗೇಂದ್ರ ಮಾತನಾಡಿದರು. ಬಾಲಕಾರ್ಮಿಕರಾಗಿ ದುಡಿಯುತ್ತಿದ್ದವರನ್ನು ರಕ್ಷಿಸಿ ವಿದ್ಯಾಭ್ಯಾಸ ಕೊಡಿಸಿದ್ದು, ಪಸ್ತುತ 10ನೇ ತರಗತಿಯಲ್ಲಿ ಶೇ. 60 ಗೂ ಅಧಿಕ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಾಗಿ ದೊರೆತ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಲಾಯಿತು. ಕಾರ್ಮಿಕ ಇಲಾಖೆಯಿಂದ ಕೆಲ ಬಡ ಕುಟುಂಬಕ್ಕೆ ದಿನಸಿ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಏರ್ಪಡಿಸಿದ್ದ ಜಾಗೃತಿ ಮತ್ತು ಅರಿವು ಜಾಥಾಕ್ಕೆ ಮಿನಿ ವಿಧಾನಸೌಧದ ಮುಂದೆ ನ್ಯಾಯಾಧೀಶ ಪ್ರತಾಪ್ ಹಸಿರು ನಿಶಾನೆ ತೋರಿದರು. ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್. ಶ್ರೀಕಂಠ, ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ತಾಲೂಕು ಕಾರ್ಮಿಕ ನಿರೀಕ್ಷಕಿ ಅಂಬಿಕಾ ಭಾಗವಹಿಸಿದ್ದರು.