

ದಾವಣಗೆರೆ: ಕಾಂಗ್ರೆಸ್ ಸರ್ಕಾರ ಬಡತನ ನಿರ್ಮೂಲನೆಗೆ ಪಣತೊಟ್ಟಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಮಹಾನಗರ ಪಾಲಿಕೆ ಮತ್ತು ತಂಜೀಮುಲ್ ಮುಸ್ಲೀಮಿನ್ ಫಂಡ್ ಅಸೋಸಿಯೇಷನ್ ವತಿಯಿಂದ ನಗರದ ನೂರಾನಿ ಶಾದಿಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಡವರ ಪರ ಅನೇಕ ಕಾರ್ಯಕ್ರಮ ರೂಪಿಸಿದೆ. ನಂತರ ಬಂದ ಸರ್ಕಾರಗಳು ಅವುಗಳನ್ನು ಅನುಷ್ಠಾನಕ್ಕೆ ತರದ ಕಾರಣ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದೆವು. ಅದರಂತೆ ಈಗಾಗಲೇ ನಾಲ್ಕು ಗ್ಯಾರಂಟಿ ಅನುಷ್ಠಾನಗೊಳಿಸಲಾಗಿದ್ದು, ಇನ್ನೊಂದು ಗ್ಯಾರಂಟಿ ಯೋಜನೆ ಶೀಘ್ರ ಕಾರ್ಯಗತಗೊಳ್ಳಲಿದೆ. ಇವುಗಳಿಂದ ಬಡವರಿಗೆ ಅನುಕೂಲ ಆಗಲಿದೆ. ಯಾವುದೇ ತೊಂದರೆ ಕಂಡುಬಂದರೆ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಮಾತನಾಡಿ ಜನರ ಸಹಕಾರದಿಂದ ಸರ್ಕಾರದ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ತಂಜೀಮುಲ್ ಮುಸ್ಲೀಮಿನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ಶೇಖ್ ದಾದು ಸೇಠ್ ಮತ್ತು ಪಾಲಿಕೆ ಸದಸ್ಯ ಸೈಯದ್ ಚಾರ್ಲಿ ಮಾತನಾಡಿದರು. ಪಾಲಿಕೆ ಆಯುಕ್ತೆ ರೇಣುಕಾ, ಸದಸ್ಯ ಕೆ.ಚಮನ್ ಸಾಬ್, ಅಸೋಸಿಯೇಷನ್‌ನ ಅಮ್‌ಜದುಲ್ಲಾ, ಸಾಬೀರ್
ಅಲಿಖಾನ್, ದಾದಾಪೀರ್, ಇಮ್ರಾನ್ ರಜಾ, ಎಚ್.ಇಮ್ತಿಯಾಜ್ ಬೇಗ್, ಮೂಸರಲೀಮ್‌ವುಲ್ಲಾ, ಷಂಷುದ್ದೀನ್ ರಜ್ವಿ, ಮಹ್ಮದ್ ಜಬೀವುಲ್ಲಾ, ಶಫೀವುಲ್ಲಾ, ಶೌಕತ್ ಅಲಿ, ಖಾದರ್ ಬಾಫ ರಜ್ವಿ, ಮಹ್ಮದ್ ಅಲಿ, ಅಸಾವುಲ್ಲಾ ಹಕಾನಿ, ನೂರ್ ಅಹ್ಮದ್, ಸನಾವುಲ್ಲಾ, ಅಕ್ಬರ್ ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ತಂಜೀಮುಲ್ ಮುಸ್ಲೀಮಿನ್ ಫಂಡ್ ಅಸೋಸಿಯೇಶನ್ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.