

ಕಿಕ್ಕೇರಿ: ಬಡತನ, ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಕೇಂದ್ರ ಸರ್ಕಾರ ಸೋತಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ಅಧ್ಯಕ್ಷ ಎಂ.ಪುಟ್ಟಮಾಧು ತಿಳಿಸಿದರು.
ಹೋಬಳಿಯ ಉದ್ದಿನಮಲ್ಲನ ಹೊಸೂರು ಕೊಪ್ಪಲು ಗ್ರಾಮದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಬಡವರಿಗೆ ಅಕ್ಕಿ ಕೊಡಿ, ದುಡ್ಡು ಕೊಡುತ್ತೇವೆ ಎಂದರೆ ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ. ಇದು ಸಂವಿಧಾನ ವಿರೋಧಿಯಾಗಿದೆ. ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಸೂಕ್ತವಾದರೂ, ಅರ್ಹರಿಗೆ, ಕೆಳಸ್ತರ, ಬಡವರಿಗೆ ಇಂತಹ ಆದ್ಯತೆ ಮೊದಲಿಗೆ ನೀಡಿ ಮೇಲೆತ್ತುವ ಕೆಲಸ ಮಾಡಬೇಕಿದೆ ಎಂದರು.
ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗೆ 15 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಸಾಲ ಮನ್ನಾ ಮಾಡಿದೆ. ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ಆರ್ಥಿಕ ಹೊರೆಯಾಗಿ ದುಪ್ಪಟ್ಟು ಬೆಲೆಯಾದರೆ ಬದುಕಲು ಸಾಧ್ಯವಿಲ್ಲ. ಉಚಿತ ಯೋಜನೆಗಳು ಬಡವರಿಗೆ, ಕೂಲಿಕಾರರಿಗೆ ಸಿಗಬೇಕಿದ್ದು ರಾಜ್ಯದ ಆರ್ಥಿಕ ಸ್ಥಿತಿ ಡೋಲಾಯಮಾನ ಆಗಬಾರದು ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ತಾಲೂಕು ಅಧ್ಯಕ್ಷ ಗಂಗೇನಹಳ್ಳಿ ಗಿರೀಶ್, ಕಾರ್ಯದರ್ಶಿ ಗೋಪಾಲ್, ಗ್ರಾಪಂ ಸದಸ್ಯ ಉಮೇಶ್, ಮುಖಂಡರಾದ ಶಿವೇಗೌಡ, ದೇವರಾಜು, ಮಂಜುಳಾ, ಶ್ರವಣನಹಳ್ಳಿ, ಗಂಗೇನಹಳ್ಳಿ ಗ್ರಾಮ ಘಟಕದ ಸದಸ್ಯರು ಹಾಜರಿದ್ದರು.