ಬಡಜನರಿಗೆ ನಿವೇಶನ ನೀಡಲು ಆಗ್ರಹಿಸಿ ಪ್ರತಿಭಟನೆ

SRP _23-02jpg
ಶ್ರೀರಂಗಪಟ್ಟಣದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ನಿವೇಶನ ರಹಿತ ಬಡಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು.
Published on

ಶ್ರೀರಂಗಪಟ್ಟಣ: ಎಲ್ಲ ವರ್ಗದ ನಿವೇಶನರಹಿತ ಬಡ ಜನರಿಗೆ ನಿವೇಶನ ನೀಡಬೇಕು ಹಾಗೂ ಸರ್ಕಾರದಿಂದ ನಿವೇಶನ ಮಂಜೂರಾಗಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕುವೆಂಪು ವೃತ್ತದಿಂದ ಸಂಘಟನೆಯ ಪದಾಧಿಕಾರಿಗಳು ಹಾಗೂ ನಿವೇಶನ ರಹಿತ ಬಡಜನರು ತಾಲೂಕು ಕಚೇರಿವರೆಗೂ ಮೆರವಣಿಗೆ ನಡೆಸಿ ಧರಣಿ ನಡೆಸಿದರು.
ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ ಮಾತನಾಡಿ, ಕ್ಷೇತ್ರದ ರಾಜಕಾರಣಿಗಳು ಬೇಕಾದ ಬೆಂಬಲಿಗರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಿ ದುರ್ಬಳಕೆ ಮಾಡುತ್ತಿದ್ದಾರೆ. ಅಕ್ರಮಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕಾದ ತಾಲೂಕು ಆಡಳಿತ ನಿರ್ಲಕ್ಷ ವಹಿಸಿದ್ದು, ಅಧಿಕಾರಿಗಳು ಪ್ರಭಾವಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಸ್ಥಳಕ್ಕೆ ತಹಸೀಲ್ದಾರ್ ಶ್ವೇತಾ.ಎನ್.ರವೀಂದ್ರ ಆಗಮಿಸಿ ಪ್ರತಿಭಟನಾ ನಿರತರ ಮನವಿ ಆಲಿಸಿ, ಬಳಿಕ ಸಮಾಜ ಕಲ್ಯಾಣ ಇಲಾಖೆ ತಾಲೂಕು ನಿರ್ದೇಶಕ ಜಗದೀಶ್ ಅವರನ್ನು ಕರೆಸಿ ಮಾಹಿತಿ ಕೇಳಿದರು. 15 ದಿನಗಳ ಒಳಗೆ ಸಮುದಾಯದ ಜನರು ಹಾಗೂ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದರು.

ಭಾರತೀಯ ಬೌದ್ಧ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಟಿ.ರಂಗಯ್ಯ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ನಂಜುಂಡಸ್ವಾಮಿ, ಮಂಡ್ಯದ ಎಸ್.ವಿಜಯಕುಮಾರ್, ಪಾಂಡವಪುರ ಮಹೇಶ್, ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕಿ ಪುಷ್ಪಾವತಿ, ತಾಲೂಕು ಸಂಘಟನಾ ಸಂಚಾಲಕ ದಿನೇಶ್, ಕೆ.ಆರ್.ಸಾಗರದ ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net