ಬಡ ಮಕ್ಕಳಿಗೆ ಉಚಿತ ಸಿಇಟಿ ತರಬೇತಿ

21Athani1
Published on

ಅಥಣಿ: ತಾಲೂಕಿನ ಗ್ರಾಮೀಣ ಮತ್ತು ಪಟ್ಟಣದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬಡ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಪ್ರವೇಶ ಪಡೆಯಲು ಜೆ.ಎ. ಸಂಸ್ಥೆಯಿಂದ ಉಚಿತವಾಗಿ ಸಿಇಟಿ ಮತ್ತು ನೀಟ್ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಜೆ.ಎ ಸಂಸ್ಥೆಯ ಅಧ್ಯಕ್ಷ ಡಾ.ರಾಮ ಕುಲಕರ್ಣಿ ಹೇಳಿದರು.

ಪಟ್ಟಣದ ಜಾಧವಜಿ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ತರಗತಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಈ ಉಚಿತ ತರಬೇತಿಗೆ ವಿದ್ಯಾರ್ಥಿಗಳು ಪ್ರತಿದಿನ ಹಾಜರಾಗಿ ಒಳ್ಳೆಯ ಫಲಿತಾಂಶ ಬರುವಂತೆ ಅಧ್ಯಯನ ಮಾಡಬೇಕು ಎಂದರು.

ಸಂಸ್ಥೆಯ ನಿರ್ದೇಶಕ ಸಂದೀಪ ಸಂಗೋರಾಮ ಮಾತನಾಡಿ, ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲ ಅನುಕೂಲತೆಗಳನ್ನು ಸಂಸ್ಥೆ ಒದಗಿಸಲು ಬದ್ದವಾಗಿದೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು.

ಸಮಾಜ ಸೇವಕ ಆನಂದ ಟೊನಪಿ ಮಾತನಾಡಿ, ಸಿಇಟಿ ಮತ್ತು ನೀಟ್ ತರಬೇತಿ ಪಡೆಯಲು ವಿದ್ಯಾರ್ಥಿಗಳು ಬೇರೆ ಊರುಗಳಿಗೆ ಹೋಗಿ ಹಣ ಖರ್ಚು ಮಾಡಿ ಕಲಿಯಬೇಕಾದ ಪರಿಸ್ಥಿತಿ ಇದೆ. ಆದರೆ, ಜೆ.ಎ.ಸಂಸ್ಥೆಯಿಂದ ಉಚಿತವಾಗಿ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಅನೀಲ ದೇಶಪಾಂಡೆ, ರವಿ ಕುಲಕರ್ಣಿ, ಎಂ.ಪಿ.ಮೇತ್ರಿ ಸೇರಿ ಉಪನ್ಯಾಸಕರು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net