

ಮೈಸೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಖರ್ಚು-ವೆಚ್ಚಗಳಿಗಾಗಿ ಮಕ್ಕಳ ಪಾಲಕರಿಂದ ದೇಣಿಗೆಯಾಗಿ ಪ್ರತಿ ತಿಂಗಳು 100 ರೂ. ಸಂಗ್ರಹಿಸಲು ಹೊರಡಿಸಿರುವ ಸುತ್ತೋಲೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೂಡಲೇ ವಾಪಸ್ ಪಡೆದುಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ಸರ್ಕಾರಿ ಶಾಲೆಗೆ ನೂರು ರೂಪಾಯಿ ಶುಲ್ಕ ಏಕೆ? ಸರ್ಕಾರಿ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಓದುತ್ತಾರೆ. ಇಂತಹ ಕ್ರಮದ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಇದಕ್ಕೆ ಮುಖ್ಯಮಂತ್ರಿ, ಶಿಕ್ಷಣ ಸಚಿವರೇ ಹೊಣೆಗಾರರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ವಪಕ್ಷೀಯ ವಿರುದ್ಧವೇ ಕಿಡಿಕಾರಿದರು.
ಕನ್ನಡ ಶಾಲೆಗಳನ್ನು ಮುಚ್ಚಲು ಏನು ಬೇಕೋ ಅದೆಲ್ಲವನ್ನೂ ಮಾಡಲಾಗುತ್ತಿದೆ. ಹಿಂದೆ ಸರ್ಕಾರದಿಂದಲೇ ಶಾಲಾ ನಿರ್ವಹಣೆಗೆ ಅನುದಾನ ನೀಡುತ್ತಿದ್ದರು. ಈಗ ಅದೆಲ್ಲವನ್ನು ನಿಲ್ಲಿಸಿದ್ದಾರೆ. ಈಗ ನಿರ್ವಹಣಾ ವೆಚ್ಚ ಹೆಸರಿನಲ್ಲಿ ನೂರು ರೂ. ವಸೂಲಿ ಮಾಡಲಾಗುತ್ತಿದೆ. ಪಾಲಕರಿಂದ ಹಣ ಸಂಗ್ರಹಿಸುವ ಮೂಲಕ ಶಾಲಾ ಶಿಕ್ಷಣ ದಿಕ್ಕು ತಪ್ಪುತ್ತಿದೆ ಎಂದು ದೂರಿದರು.
ಕೋವಿಡ್ ಸಾಂಕ್ರಾಮಿಕ ರೋಗ ಬಂದಾಗಿನಿಂದಲೂ ಮಕ್ಕಳು ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಅವರನ್ನು ಶಾಲೆಗೆ ಮರಳಿ ಕರೆತರುವ ಕೆಲಸ ಆಗಿಲ್ಲ. ಇಲಾಖೆ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಕನ್ನಡ ಭಾಷೆ ಕಥೆಯೂ ಮುಗಿದು ಹೋಗುತ್ತಿದೆ. ಕನ್ನಡ ಶಾಲೆಗಳು ಬಂದ್ ಆಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳಿಗೆ ಶಿಕ್ಷಣ ನೀಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ಆದರೆ, ಮಕ್ಕಳ ಶಿಕ್ಷಣವನ್ನು ಸರ್ಕಾರವೇ ಕಿತ್ತುಕೊಳ್ಳುತ್ತಿದೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗಲಿದೆಯಲ್ಲದೇ, ಕನ್ನಡ ಶಾಲೆಗಳಿಗೆ ಕಂಟಕವೂ ಎದುರಾಗಲಿದೆ. ಇದು ಆರ್ಥಿಕವಾಗಿ ಹಿಂದುಳಿದವರಿಗೂ ಮಾರಕವಾಗಿದೆ ಎಂದರು.
ಸರ್ಕಾರದಲ್ಲಿ ಹಣವಿಲ್ಲದಿದ್ದರೆ ದಾನಿಗಳನ್ನು ಹಿಡಿಯಿರಿ. ಅದನ್ನು ಬಿಟ್ಟು ಬಡ ಪಾಲಕರಿಗೆ ನಿರ್ವಹಣೆಗೆ ಹಣ ಕೊಡಿ ಎಂದರೆ ಹೇಗೆ? ಇದರ ಪರಿಣಾಮ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ. ಇದುವೇ ಸರ್ಕಾರಕ್ಕೂ ಬೇಕಾಗಿರುವುದು ಎಂದು ಗುಡುಗಿದರು.
ದಲಿತರ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಊಟ ಮಾಡಿದ್ದಾರೆ. ತಟ್ಟೆಲೋಟ, ಊಟ-ತಿಂಡಿ ಸೇರಿದಂತೆ ಎಲ್ಲವನ್ನು ನೀವೇ ತಂದು ತಿನ್ನೋದು ಬೇಕಾ? ನೀವು ಮಾಡಬೇಕಾದ ಕೆಲಸ ಮಾಡಿ. ಅದು ಬಿಟ್ಟು ರಾಜಕೀಯ ಲಾಭಕ್ಕಾಗಿ ಹೋಗಬೇಡಿ. ದಲಿತರ ಮನೆಗೆ ನೀವು ಬಂದರೆ ನಿಮಗೆ ಲಾಭವೇ ಹೊರತು ಅವರಿಗೆ ಏನು ಲಾಭ? ಆದ್ದರಿಂದ ದಲಿತ ಮನೆಗಳಿಗೆ ದಯಮಾಡಿ ಹೋಗಬೇಡಿ. ಅಲ್ಲಿಗೆ ಹೋಗಿ ಅವರಿಗೂ ಅವಮಾನ ಮಾಡಬೇಡಿ ಎಂದರು.
ದಲಿತರ ಮನೆಗೆ ಹೋಗುವುದಾದರೆ ನಿರ್ದಿಷ್ಟ ಕಾರ್ಯಕ್ರಮದೊಂದಿಗೆ ಹೋಗಿ. ಅದು ಬಿಟ್ಟು ಬ್ರಾಹ್ಮಣರ, ಲಿಂಗಾಯತರ ಬ್ರಾೃಂಡ್ ಹೋಟೆಲ್ ಊಟ-ತಿಂಡಿ ತಿನ್ನೋಕೆ ದಲಿತರ ಮನೆ ಹೋಗಬೇಕಾ ಎಂದು ಕಿಡಿಕಾರಿದರು.
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಸಂಸದ ಪ್ರತಾಪ್ ಸಿಂಹ ಮೈಸೂರಿನ ಮಹಾರಾಜರಿಗಿಂತ ದೊಡ್ಡವರು. ಅವರಿಗಿಂತ ನಾನೇ ಜಾಸ್ತಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅವರ ಬಗ್ಗೆ ನಾನೇನು ಮಾತನಾಡಲಿ. ಅವರು ದೊಡ್ಡ ವ್ಯಕ್ತಿ ಎಂದು ಕುಟುಕಿದರು.
ಸರ್ಕಾರ ಕೂಡಲೇ ಬಂಧಿಸಲಿ
ಆದಿವಾಸಿ ಕರಿಯಯ್ಯ ಲಾಕಪ್ ಡೆತ್ ಪ್ರಕರಣದ ಆರೋಪಿಗಳಾದ ಅರಣ್ಯ ಇಲಾಖೆಯ 17 ನೌಕರರನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಎಚ್.ವಿಶ್ವನಾಥ್ ಆಗ್ರಹಿಸಿದರು.
ನ್ಯಾಯಾಧೀಶರೇ ನಿಂತು ಕರಿಯಯ್ಯನ ಮರಣೋತ್ತರ ಪರೀಕ್ಷೆಗೆ ಮುಗಿಸಿದ್ದಾರೆ. ಇವರ ಮಾನವೀಯತೆಗೆ ಮತ್ತು ನ್ಯಾಯದ ಕಾಳಜಿಗೆ ಮೊದಲು ಆರೋಪಿಗಳನ್ನು ಬಂಧಿಸಬೇಕು. ಆದರೆ, ಇನ್ನೂ ಆರೋಪಿಗಳ ಬಂಧನವಾಗಿಲ್ಲ. ತನಿಖಾಧಿಕಾರಿಯನ್ನು ಬದಲಾಯಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನಗಳು ನಡೆಯುತ್ತಿವೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸರ್ಕಾರ ಮತ್ತು ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.