

ಶ್ರೀರಂಗಪಟ್ಟಣ: ಖಾಸಗಿ ಫೈನಾನ್ಸ್ ಸಂಸ್ಥೆಯಿಂದ ಮನೆ ಜಪ್ತಿಗೊಂಡು ಅನ್ಯಾಯಕ್ಕೊಳಗಾಗಿರುವ ಬಡ ಕುಟುಂಬಕ್ಕೆ ತಾಲೂಕು ಆಡಳಿತ ಮಧ್ಯ ಪ್ರವೇಶಿಸಿ ಸಹಕಾರ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಆಡಳಿತ ಭವನದ ತಹಸೀಲ್ದಾರ್ ಕಚೇರಿಗೆ ನೊಂದ ರೈತ ಮಹಿಳೆ ರತ್ನಮ್ಮ ಅವರೊಂದಿಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಅವರ ನೇತೃತ್ವದಲ್ಲಿ ಬೆಂಬಲಿಗರು ಭೇಟಿ ನೀಡಿ ಒತ್ತಾಯಿಸಿದರು.
ಕೆ.ಎಸ್.ನಂಜುಂಡೇಗೌಡ ಮಾತನಾಡಿ, ತಾಲೂಕಿನ ಕಸಬಾ ಹೋಬಳಿಯ ಬೆಳವಾಡಿ ಗ್ರಾಮದ ಲೇ.ಚಿಕ್ಕಣ್ಣ ಅವರ ಪತ್ನಿ ರತ್ನಮ್ಮ ಕೂಲಿ ಕೆಲಸ ಮಾಡಿ ಜೀವನ ದೂಡುತ್ತಿದ್ದಾರೆ. ಮಳೆ-ಗಾಳಿಯಿಂದ ಶಿಥಿಲಗೊಂಡಿದ್ದ ತಮ್ಮ ಮನೆಯ ದುರಸ್ತಿಗಾಗಿ 2 ವರ್ಷಗಳ ಹಿಂದೆ ಖಾಸಗಿ ಮೈಕ್ರೋ ಫೈನಾನ್ಸ್‌ನಲ್ಲಿ 3 ಲಕ್ಷ ಸಾಲ ಪಡೆದಿದ್ದರು. ಈ ಪೈಕಿ 1.50 ಲಕ್ಷ ರೂ. ಗಳನ್ನು ಕಂತಿನ ರೂಪದಲ್ಲಿ ಸಾಲ ಮರುಪಾವತಿಸಿದ್ದಾರೆ. ಆರೋಗ್ಯ ಸಮಸ್ಯೆ ಕಾರಣ ಕೆಲ ಕಂತು ಬಾಕಿ ಉಳಿಸಿಕೊಂಡಿದ್ದು, ಮರುಪಾವತಿಗೆ ಕಾಲಾವಕಾಶ ಕೋರಿದ್ದರು. ಆದರೆ ಬಡ್ಡಿ ಸೇರಿ 6 ಲಕ್ಷ ರೂ. ಕೊಡಬೇಕು ಎಂದು ಫೈನಾನ್ಸ್‌ನವರು ಏಕಾಏಕಿ ನ್ಯಾಯಾಲಯದಿಂದ ಆದೇಶ ತಂದು ಮನೆ ಜಪ್ತಿ ಮಾಡಿ ಬಡ ಕುಟುಂಬವನ್ನು ಹೊರದೂಡಿರುವುದು ಸರಿಯಲ್ಲ. ಹೀಗಾಗಿ ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಬಡ ಕುಟುಂಬಕ್ಕೆ ನೆರವಾಗಬೇಕು ಎಂದು ಕೋರಿದರು.
ಸಂಬಂಧಪಟ್ಟಣ ಹೋಬಳಿ ರಾಜಸ್ವ ನೀರಿಕ್ಷಕ ಹಾಗೂ ಗ್ರಾಮ ಲೆಕ್ಕಿಗರಿಂದ ಮಾಹಿತಿ ತರಿಸಿ ಪರಿಶೀಲಿಸಿ ನೆರವಾಗುವುದಾಗಿ ತಹಸೀಲ್ದಾರ್ ಶ್ವೇತಾ.ಎನ್.ರವೀಂದ್ರ ಭರವಸೆ ನೀಡಿದರು. ಮುಖಂಡರಾದ ಬಿ.ಸಿ.ಕೃಷ್ಣೇಗೌಡ, ಹುಂಡುವಾಡಿ ಮಹದೇವು,ಮಹಾಲಿಂಗು, ಪುರುಷೋತ್ತಮ್, ಪುಟ್ಟಮಾದು, ಕೆಂಪೇಗೌಡ, ಡಿ.ಮಂಜುನಾಥ್, ವಿನಯ್ ಕುಮಾರ್,ಜಯರಾಮು, ಸ್ವಾಮಿ, ರಾಮಚಂದ್ರು, ಫಿಲಿಪ್, ಶಂಕರೇಗೌಡ,ಮಹೇಶ್ ಇತರರು ಉಪಸ್ಥಿತರಿದ್ದರು.