

ಶ್ರೀಧರ ಅಣಲಗಾರ ಯಲ್ಲಾಪುರ
ಲಾಕ್ಡೌನ್ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಡ ಕಲಾವಿದರಿಗೆ ಪಡಿತರ ಹಾಗೂ ಅಗತ್ಯ ಸಾಮಗ್ರಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಕಲಾವಿದರು ಎಂದು ಹೇಳಿಕೊಳ್ಳುವುದಕ್ಕೆ ಯಾವುದೇ ಪ್ರಮಾಣಪತ್ರ, ಗುರುತಿನ ಪತ್ರ ಇಲ್ಲದೇ ಯಕ್ಷಗಾನ ಕಲಾವಿದರು ಈ ಸೌಲಭ್ಯದಿಂದ ವಂಚಿತರಾಗುವಂತಾಗಿದೆ.
ಬಡ ಕಲಾವಿದರಿಗೆ ಆಯಾ ತಹಸೀಲ್ದಾರ್ ಕಚೇರಿ ಮೂಲಕ ಆಹಾರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸಚಿವ ಸಿ.ಟಿ. ರವಿ ಏ. 14ರಂದು ಆದೇಶಿಸಿದ್ದಾರೆ. ಕೆಲ ಬಡ ಕಲಾವಿದರು ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ತಹಸೀಲ್ದಾರ್ ಕಚೇರಿಗಳಿಗೆ ತೆರಳಿದಾಗ ‘ನೀವು ಕಲಾವಿದರು ಎನ್ನುವುದಕ್ಕೆ ಅಗತ್ಯ ದಾಖಲೆ ಬೇಕು’ ಎಂದು ಕೇಳುತ್ತಿದ್ದಾರೆ. ಆದರೆ, ಬಹುತೇಕ ಯಕ್ಷಗಾನ ಕಲಾವಿದರ ಬಳಿ ಅಂತಹ ದಾಖಲೆಗಳು ಇಲ್ಲ.
ಡೇರೆ ಮೇಳ ಹಾಗೂ ಬಯಲಾಟ ಮೇಳಗಳಲ್ಲಿ ಹಲವು ಕಲಾವಿದರು, ಮೇಳಗಳ ಹೊರತಾಗಿ ಸ್ಥಳೀಯವಾಗಿ ಯಕ್ಷಗಾನದಿಂದಲೇ ಬದುಕು ಕಟ್ಟಿಕೊಂಡಿರುವ ಕಲಾವಿದರು, ಪ್ರಸಾಧನ ಕಲಾವಿದರಿಗೆಲ್ಲ ಈ ಸೌಲಭ್ಯದ ಅವಶ್ಯಕತೆಯಿದೆ. ಆದರೆ, ಅವರು ಕಲಾವಿದರು ಎನ್ನುವುದಕ್ಕೆ ಅವರು ಕಾರ್ಯನಿರ್ವಹಿಸುವ ಮೇಳದಿಂದಾಗಲಿ, ಯಕ್ಷಗಾನಕ್ಕೆ ಸಂಬಂಧಿಸಿದ ಸಂಘ-ಸಂಸ್ಥೆ, ಮಂಡಳಿಗಳಿಂದಾಗಲಿ ಯಾವುದೇ ಪ್ರಮಾಣಪತ್ರ ಅಥವಾ ಗುರುತಿನ ಪತ್ರಗಳಿಲ್ಲ.
ಕೈ ಹಿಡಿಯಬೇಕು ಅಕಾಡೆಮಿ: ಇಂತಹ ಸಂಕಷ್ಟದ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಕಲಾವಿದರ ಕೈಹಿಡಿಯುವ ಅಗತ್ಯವಿದೆ. ಯಕ್ಷಗಾನದಿಂದಲೇ ಬದುಕು ಸಾಗಿಸುತ್ತಿರುವ ಕಲಾವಿದರಿಗೆ ಅಕಾಡೆಮಿಯಿಂದ ಪ್ರಮಾಣಪತ್ರವನ್ನೋ ಅಥವಾ ಗುರುತಿನ ಪತ್ರವನ್ನೋ ನೀಡಿದರೆ ಸೌಲಭ್ಯ ಪಡೆಯಲು ಅನುಕೂಲವಾಗಬಹುದು.
ಜಿಲ್ಲೆಯ ಕಲಾವಿದರು ಅತಂತ್ರ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಯಲಾಟ ಮೇಳಗಳ ಕಲಾವಿದರಿಗೆ ಆಯಾ ದೇವಸ್ಥಾನಗಳ ವತಿಯಿಂದ ಸಂಬಳ ನೀಡುವ ಕುರಿತು ಮುಜರಾಯಿ ಇಲಾಖೆ ಸೂಚನೆ ನೀಡಿದೆ. ಅಲ್ಲದೆ, ವಿವಿಧ ಸಂಘ-ಸಂಸ್ಥೆಗಳು ಕಲಾವಿದರ ನೆರವಿಗೆ ಧಾವಿಸುತ್ತಿವೆ. ಆದರೆ, ಉತ್ತರ ಕನ್ನಡದ ಕಲಾವಿದರು ಇದರಿಂದ ವಂಚಿತರಾಗುತ್ತಿದ್ದಾರೆ.
ಯಕ್ಷಗಾನ ಕಲಾವಿದರು ಯಕ್ಷಗಾನವನ್ನು ಆರ್ಥಿಕ ದೃಷ್ಟಿಯಿಂದಷ್ಟೇ ಅಲ್ಲ ಮಾನಸಿಕ ನೆಮ್ಮದಿಯ ಉದ್ದೇಶದಿಂದಲೂ ನೆಚ್ಚಿಕೊಂಡವರು. ಕಲಾವಿದರೆನ್ನುವುದಕ್ಕೆ ಯಾವ ಆಧಾರವಿಲ್ಲದೇ ಸಿಗುವ ಸೌಲಭ್ಯದಿಂದಲೂ ವಂಚಿತರಾಗುವ ಸ್ಥಿತಿ ಬಂದೊದಗಿದೆ. ಅಕಾಡೆಮಿ ಈ ಸಮಸ್ಯೆಯಿಂದ ಪಾರು ಮಾಡಿ ಕಲಾವಿದರ ನೆರವಿಗೆ ಬರಬೇಕಾಗಿದೆ. | ಸುಬ್ರಹ್ಮಣ್ಯ ಚಿಟ್ಟಾಣಿ, ಹಿರಿಯ ಯಕ್ಷಗಾನ ಕಲಾವಿದ
ಯಕ್ಷಗಾನ ಕಲಾವಿದರು, ಪ್ರಸಾಧನದವರು, ಕೆಲಸಗಾರರೆಲ್ಲರೂ ಅಸಂಘಟಿತ ಕಾರ್ವಿುಕರೇ ಆಗಿದ್ದಾರೆ. ಡೇರೆ ಮೇಳದಲ್ಲಿ ಕೆಲವರು, ಬಯಲಾಟ ಮೇಳಗಳಲ್ಲಿ ಹಲವರು ತೀರಾ ಬಡ ಕಲಾವಿದರಿದ್ದಾರೆ. ಈಗ ಅವರ ಆದಾಯಕ್ಕೆ ಕಡಿವಾಣ ಬಿದ್ದಿದೆ. ಅಕಾಡೆಮಿಯ ಅಧ್ಯಕ್ಷರು, ಸದಸ್ಯರು ಕಲಾವಿದರ ಪರವಾಗಿ ಧ್ವನಿ ಎತ್ತಬೇಕಾದ ಅಗತ್ಯತೆಯಿದೆ. | ಸುಬ್ರಹ್ಮಣ್ಯ ಯಲಗುಪ್ಪ, ಯಕ್ಷಗಾನ ಕಲಾವಿದ
ಕೆಲವು ಕಲಾವಿದರು ದಾಖಲೆ ಹೊಂದಿದ್ದಾರೆ. ಆದರೆ, ಬಡ ಕಲಾವಿದ ನೇಪಥ್ಯದಲ್ಲೇ ಇರಬೇಕಾಗುತ್ತದೆ. ಅವರಿಗೆ ದಾಖಲೆ ಪಡೆಯಲು ಬೇಕಾದ ಮಾರ್ಗದರ್ಶನ ನೀಡುವವರು ಕಡಿಮೆ ಇದ್ದಾರೆ. ಕಷ್ಟಕಾಲದಲ್ಲಿ ಬಡ ಕಲಾವಿದರಿಗೆ ಸರ್ಕಾರ, ಸಂಘ-ಸಂಸ್ಥೆಗಳು, ದಾನಿಗಳಿಂದ ಘೊಷಿತವಾದ ನೆರವನ್ನು ಅರ್ಹರು ಪಡೆಯುವಂತಾಗಲು ಅಕಾಡೆಮಿ ನೆರವಾಗಲಿ. | ಭಾಸ್ಕರ ಗಾಂವ್ಕಾರ ಬಿದ್ರೆಮನೆ
ಯಕ್ಷಗಾನ ಕಲಾವಿದ ಇಲಾಖೆಯ ಆದೇಶದಲ್ಲಿ ಸೌಲಭ್ಯ ಪಡೆಯಲು ಅರ್ಹರು ಯಾರ್ಯಾರು ಎಂಬುದು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಆದೇಶವನ್ನು ಸರಿಯಾಗಿ ಅರಿಯದೇ ಕೆಲ ಕಲಾವಿದರು ಸೌಲಭ್ಯ ಪಡೆಯುವುದಕ್ಕೆ ಮುಂದಾಗುತ್ತಿದ್ದಾರೆ. ಸ್ಥಳೀಯ ಆಡಳಿತದಿಂದ ಕಲಾವಿದರೆಂಬ ಪ್ರಮಾಣ ಪತ್ರ ಪಡೆದು ನೀಡಿದರೆ ಅದನ್ನು ಇಲಾಖೆ ಪರಿಗಣಿಸುತ್ತದೆ. ಈ ವರ್ಷದ ಯಕ್ಷಗಾನದ ಸೀಸನ್ ಕರೊನಾ ಲಾಕ್ಡೌನ್ ನಿಂದಲೇ ಮುಗಿಯಲಿದೆ. ಮುಂದಿನ ಸೀಸನ್ ಆರಂಭವಾಗುವವರೆಗೆ ಕಲಾವಿದರಿಗೆ ಧನಸಹಾಯದ ಅಗತ್ಯವಿದೆ. ಆ ನಿಟ್ಟಿನಲ್ಲಿ ಅಕಾಡೆಮಿಯ ಅನುದಾನದಲ್ಲಿ ಅಶಕ್ತ ಕಲಾವಿದರಿಗೆ ನೆರವಾಗುವ ಚಿಂತನೆಯಿದೆ. | ಪ್ರೊ.ಎಂ.ಎ.ಹೆಗಡೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು