

ವಿಜಯಪುರ: ಕೋವಿಡ್-19 ಮಹಾಮಾರಿಯ ಹಾವಳಿಯಿಂದಾಗಿ ಲಾಕಡೌನ್ ಆಗಿದ್ದ ವಿಜಯಪುರ ಜಿಲ್ಲೆ ಇಂದಿನಿಂದ ಸ್ವಲ್ಪ ಸಡಿಲಿಕೆಯಾಗಿದ್ದು, ಸೆಮಿ ಅನಲಾಕ್ ಆಗಿದೆ. ಹೀಗಾಗಿ ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ವ್ಯಾಪಾರ, ವಹಿವಾಟಿಗಾಗಿ ಬೆಳಗ್ಗೆ 6ರಿಂದ ಮದ್ಯಾಹ್ನ 2ಗಂಟೆಯ ವರೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಷರತ್ತುಗಳ ಅನ್ವಯದಂತೆ ಕೈಗಾರಿಕೆ ಮತ್ತು ಗಾರ್ಮೆಂಟ್ಸ್ ಗೆ ಅನುಮತಿ ನೀಡಿರುವ ಸರ್ಕಾರ ಬಟ್ಟೆ ವ್ಯಾಪಾರಿಗಳಿಗೆ ಅನ್ಯಾಯ ಮಾಡಿದೆ. ಬಟ್ಟೆ ವ್ಯಾಪಾರಕ್ಕೂ ಸಹ ಅನುಮತಿ ನೀಡಬೇಕು ಎಂದು ವಿಜಯಪುರ ಜವಳಿ ವ್ಯಾಪಾರಸ್ಥರ ಸಂಘದಿಂದ ವಿಜಯಪುರ ಡಿಸಿ ಮೂಲಕ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಯಿತು. ಕಳೆದ ವರ್ಷವೂ ಸಹ ಲಾಕಡೌನ್ ನಿಂದ ವ್ಯಾಪಾರವಿಲ್ಲದೆ ನಷ್ಟವಾಗಿದೆ. ಇದೀಗ ಸೂಕ್ತ ಮಾರ್ಗಸೂಚಿಗಳ ಅನ್ವಯ ಬಟ್ಟೆ ಮಾರಾಟಕ್ಕೂ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ. ವಾರದಲ್ಲಿ ಮೂರು ದಿನ ಅಥವಾ ನಿತ್ಯ ಬೆಳಗ್ಗೆ 6ರಿಂದ 10 ಗಂಟೆಯ ವರೆಗೆ ಬಟ್ಟೆ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಜವಳಿ ವ್ಯಾಪಾರಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಜವಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗೋಕುಲ ಮಹೇಂದ್ರಕರ, ಕಾರ್ಯದರ್ಶಿ ವಿಕಾಸ ದರಬಾರ, ಚೇರಮನ್ ವಿಶ್ವನಾಥ ಬೀಳಗಿ, ಎಪಿಎಂಸಿ ಅಧ್ಯಕ್ಷ ರವಿ ಬಿಜ್ಜರಗಿ, ರೆಡಿಮೇಡ್ ಬಟ್ಟೆ ಅಸೋಷಿಯೇಷನ್ ಅಧ್ಯಕ್ಷ ಪ್ರದೀಪ ಮೊಗಲಿ ಸೇರಿದಂತೆ ವ್ಯಾಪಾರಸ್ಥರು ಉಪಸ್ಥಿತಿ ಇದ್ದರು.