

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಅರಕೆರೆ ಹಳ್ಳಕ್ಕೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯನ್ನು ಗುರುವಾರ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮೃತಳನ್ನು ಉಪ್ಪರಿಗೇನಹಳ್ಳಿ ಲತಮ್ಮ(45)ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ 10-30ರ ವೇಳೆ ಉಪ್ಪರಿಗೇನಹಳ್ಳಿ-ಗೂಳಿಹೊಸಹಳ್ಳಿ ಮಾರ್ಗದ ಅರಕೆರೆ ಹಳ್ಳಕ್ಕೆ ಬಟ್ಟೆ ತೊಳೆಯಲು ಲತಮ್ಮ ತೆರಳಿದ್ದರು.
ಮಧ್ಯಾಹ್ನವಾದರೂ ಮನೆಗೆ ಹಿಂತಿರುಗಿ ಬರದ ಕಾರಣ ಆಕೆಯ ಮೈದುನ ಮತ್ತಿತರರು,ಹಳ್ಳದ ಬಳಿ ಹುಡುಕಾಡಿದಾಗ ಸಮೀಪದ ಹೊಲದ ಬದುವಿನಲ್ಲಿ ಶವ ಪತ್ತೆಯಾಗಿದೆ.
ಆಕೆ ಧರಿಸಿದ್ದ ಬೆಂಡೋಲೆ, 20 ಗ್ರಾಂ.ತೂಕದ ಬಂಗಾರದ ಸರ ಇರಲಿಲ್ಲ. ಒಡವೆ ಅಪಹರಿಸುವ ದುರುದ್ದೇಶದಿಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಚಿತ್ರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲಿಸಿದರು.ಆರೋಪಿಗಳ ಶೋಧಕ್ಕೆ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.