ಬಜೆಟ್‌ನಲ್ಲಿ ಘೋಷಿಸಿದಂತೆ ವೇತನ ಪರಿಷ್ಕರಣೆಗೆ ಪಟ್ಟು : ಬಿಸಿಯೂಟ ತಯಾರಕರಿಂದ ಪ್ರತಿಭಟನೆ

3 New
Published on

ರಾಮನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನ ರಾಮನಗರ ಜಿಲ್ಲಾ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ಎಚ್. ನಿರ್ಮಲಾ ಮಾತನಾಡಿ, 19 ವರ್ಷಗಳಿಂದಲೂ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಮಹತ್ವದ ಕೆಲಸವನ್ನು ಮಾಡಿಕೊಂಡು ಬರುವ ಮೂಲಕ ಸರ್ಕಾರದ ಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಆದರೆ, ಇವರಿಗೆ ಪ್ರತಿ ತಿಂಗಳು ಕೇವಲ 2700 ರೂ. ವೇತನ ನೀಡುತ್ತಿದ್ದು, ಇದು ಜೀವನ ನಿರ್ವಹಣೆಗೆ ಸಾಲದಾಗಿದೆ. ಅನ್ಯ ಉದ್ಯೋಗವನ್ನು ಹುಡುಕಿಕೊಳ್ಳಲು ಸಾಧ್ಯವಾಗದೆ ಇರುವು ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದು, ಕಷ್ಟದಲ್ಲಿಯೇ ಜೀವನ ನಡೆಸುವಂತೆ ಆಗಿದೆ. ವೇತನ ಹೆಚ್ಚಳ ಮಾಡುವಂತೆ ಈಗಾಗಲೇ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ.

ಕಳೆದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಬಿಸಿಯೂಟ ತಯಾರಕರ ವೇತನವನ್ನು ಪರಿಷ್ಕರಣೆ ಮಾಡಿ ಘೋಷಣೆ ಮಾಡಿದೆ. ಆದರೆ ಇದು ಕೇವಲ ಘೋಷಣೆ ಆಗಿಯೇ ಉಳಿದಿದ್ದು, ಇನ್ನು ಕಾರ್ಯಗತಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ವೇತನ ಹೆಚ್ಚಳ ಸೇರಿ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ನಿರ್ಮಲಾ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ರೋಸ್ ಮೇರಿ, ಎಸ್‌ಡಿಎಂಸಿ ರಾಜ್ಯ ಉಪಾಧ್ಯಕ್ಷ ಶಂಭೂಗೌಡ, ರಾಮನಗರ ತಾಲೂಕು ಅಧ್ಯಕ್ಷೆ ಅನುಸೂಯಮ್ಮ, ಕಾರ್ಯದರ್ಶಿ ಮಂಗಳಾ, ನಾವು ದ್ರಾವಿಡ ಕನ್ನಡಿಗರು ಚಳವಳಿಯ ಅಭಿಗೌಡ ಮುಂತಾದವರು ಇದ್ದರು.

  • ಬೇಡಿಕೆಗಳು 1. ಕನಿಷ್ಠ 21 ಸಾವಿರ ರೂ ಮಾಸಿಕ ವೇತನ 2. ಅಲಹಾಬಾದ್ ಹೈಕೋರ್ಟ್ ತೀರ್ಪಿನಂತೆ ಸೇವೆ ಖಾಯಂಗೊಳಿಸಿ ಎಲ್ಲ ಸೌಲಭ್ಯ ನೀಡಬೇಕು 3. ಬಿಸಿಯೂಟ ತಯಾರಿಕೆ ಮತ್ತು ಪೂರೈಕೆ ಖಾಸಗಿವಯರಿಗೆ ವಹಿಸುವ ತೀರ್ಮಾನ ಕೈಬಿಡಬೇಕು 4. ಬಿಸಿಯೂಟ ತಯಾರಿಕೆ ಯೋಜನೆ ಹೆಸರನ್ನು ‘ನಿರಂತರ’ ಎಂದು ಬದಲಾಯಿಸಬೇಕು 5. ಬಿಸಿಯೂಟ ತಯಾರಿಕೆ ಕಾರ್ಮಿಕರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕು 6. ವಯೋ ನಿವೃತ್ತರಾದವರಿಗೆ 2 ಲಕ್ಷ ರೂ. ಇಡುಗಂಟು ಮತ್ತು ಮಾಸಿಕ 3 ಸಾವಿರ ರೂ. ಪಿಂಚಣಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net