

ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ ನಡೆಸಿದರು.
ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ. ಕರೊನಾ ಲಾಕ್ಡೌನ್ ವೇಳೆ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಂತ ವಾಹನಗಳನ್ನು ಬಳಸಿ ಮನೆಮನೆಗೆ ಆಹಾರ ಸಾಮಗ್ರಿ ಹಂಚಿದ್ದಾರೆ. ಸಾರ್ವಜನಿಕರಿಂದ ಹಲ್ಲೆಗೊಳಗಾದರೂ ಎದೆಗುಂದದೆ ಕೆಲಸ ಮಾಡಿದ ಹೆಣ್ಣು ಮಕ್ಕಳ ಕಡೆಗೆ ಸರ್ಕಾರ ಗಮನ ಹರಿಸಿಲ್ಲ. ಆದ್ದರಿಂದ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರಿಸದ್ದರೆ ಹೆಚ್ಚುವರಿ ಕೆಲಸಗಳಾದ ಇ-ಸರ್ವೆ, ಭಾಗ್ಯಲಕ್ಷ್ಮಿ ಯೋಜನೆ, ಮಾತೃವಂದನಾ, ಮಾತೃಶ್ರೀ, ಮಾತೃಪೂರ್ಣ, ಸ್ತ್ರೀ ಶಕ್ತಿ, ಚುನಾವಣೆ ಕಾರ್ಯಗಳು ಸೇರಿ ಇತರ ಕೆಲಸಗಳನ್ನು ಬಹಿಷ್ಕರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು, 2021-22ರ ಬಜೆಟ್ನಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಸಾವಿತ್ರಿ ಸಬನಿಸ್, ವಿಜಯಾ ಪಾಟೀಲ, ಡಿ.ಎಚ್. ರಡ್ಡೇರ, ಶಂಕ್ರಮ್ಮ ಕೋಳಿವಾಡ ಇತರರು ಇದ್ದರು.
ರೋಣದಲ್ಲಿ ಉಪವಾಸ ಸತ್ಯಾಗ್ರಹ
ರೋಣ: ಅಂಗನವಾಡಿ ನೌಕರರ ಸಂಘದ ತಾಲೂಕು ಘಟಕದಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು. ತಾಲೂಕು ಘಟಕದ ಅಧ್ಯಕ್ಷೆ ದುಂಡಮ್ಮ ಬಳಿಗಾರ ಮಾತನಾಡಿ, ಕರೊನಾ ಸಂದರ್ಭದಲ್ಲಿ ಕಾರ್ಯದ ಒತ್ತಡದಿಂದ 35 ಜನ ಹಾಗೂ ಕರೊನಾ ಸೋಂಕಿನಿಂದ 24 ಕಾರ್ಯಕರ್ತೆಯರು ಪ್ರಾಣ ಕಳೆದುಕೊಂಡರೂ ಸರ್ಕಾರ ನಮ್ಮತ್ತ ನೋಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶೋಭಾ ಭಜಂತ್ರಿ, ಶಶಿಕಲಾ ಗಾಣಿಗೇರ, ಗಂಗಮ್ಮಾ ದೇವರಡ್ಡಿ, ಗೀತಾ ಪಾಟೀಲ, ಚಂದ್ರಕಲಾ ಕಬರಳ್ಳಿ, ಜಯದೇವಿ ಕಳಸಾಪೂರ, ಗಂಗಮ್ಮಾ ಪಾಟೀಲ, ವಿಜಯಲಕ್ಷ್ಮೀ ದಿಂಡೂರ ಇತರರು ಇದ್ದರು.
ಕಾರ್ಯ ಸ್ಥಗಿತಗೊಳಿಸಿ ಆಕ್ರೋಶ
ಮುಂಡರಗಿ: ಅಂಗನವಾಡಿ ನೌಕರರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿ ಹಾಗೂ ಹೆಚ್ಚುವರಿ ಕೆಲಸಗಳನ್ನು ಬಹಿಷ್ಕರಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ ನಡೆಸಿದರು.
ಉಪ ತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಮನವಿ ಸ್ವೀಕರಿಸಿದರು. ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಸುಶೀಲಾ ಚಲವಾದಿ, ವೈ.ಎನ್. ಗೌಡರ, ಕಮಲಾಕ್ಷಿ ಬೀಳಗಿ, ನಾಗರತ್ನಾ ಲಕ್ಕುಂಡಿ, ಎ.ಎಸ್. ಸಾಲಿಮಠ, ಸಿ.ಬಿ. ಶಳಿಕೆ, ಎಸ್.ಎಸ್. ಬೂದಿಹಾಳಮಠ, ಎಸ್.ಎನ್. ಹಮ್ಮಿಗಿ, ಎಚ್.ಎಚ್. ಮುದಗಲ್ಲ, ಎಸ್.ಕೆ. ಹೇಮಗಿರಿಮಠ, ಆರ್.ಆರ್. ಹಡಪದ, ಎನ್.ಕೆ. ಮುಲ್ಲಾ, ಎಲ್.ಆರ್. ಪವಾರ, ಆರ್.ಬಿ. ನೀಲಪ್ಪಗೌಡ್ರ, ಎನ್.ಎಚ್. ಹಲಗೇರಿ, ಎಂ.ಎಚ್. ಹಾದಿಮನಿ ಇತರರು ಇದ್ದರು.