ಬಜೆಟ್‌ನಲ್ಲಿ ರೈತರಿಗೆ ಬಂಪರ್ ಕೊಡುಗೆ : ವಿಜಯವಾಣಿ ಕೃಷಿ ಮೇಳದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸುಳಿವು

Krushi mela1
Published on

ವಿಜಯವಾಣಿ ಸುದ್ದಿಜಾಲ ಮೈಸೂರು
ರೈತರ ಪರಿಸ್ಥಿತಿ ಸುಧಾರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ರೈತ ಕೇಂದ್ರಿತ ಕಾರ್ಯಕ್ರಮಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ಮುಂದಿನ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಕೊಡುಗೆಯ ಸುಳಿವು ನೀಡಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಆಯೋಜಿಸಿರುವ ಮೂರು ದಿನಗಳ ಕೃಷಿ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರ ಗ್ರಾಮೀಣ ಸಾಲ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು ರೈತರಿಗೆ ಸಾಲದ ಮಿತಿ ಹೆಚ್ಚಳವನ್ನು ಮುಂದಿನ ಬಜೆಟ್‌ನಲ್ಲಿ ಪ್ರಕಟಿಸಲಾಗುವುದು. ರೈತರು ಹೊಂದಿದ ಹಿಡುವಳಿ ಆಧಾರದಲ್ಲಿ ಸಾಲದ ಅನುಪಾತ ವೈಜ್ಞಾನಿಕವಾಗಿ ನಿಗದಿಯಾಗಿದೆ. ಆದರೆ ಬ್ಯಾಂಕ್‌ಗಳು ಸಾಲದ ಅನುಪಾತ ಪಾಲನೆ ಮಾಡದ ಕಾರಣ ದುಬಾರಿ ಬಡ್ಡಿ ದರದ ಖಾಸಗಿ ಸಾಲಕ್ಕೆ ಮೊರೆ ಹೋಗುತ್ತಿದ್ದಾರೆ ಎಂದರು.
ವೈಜ್ಞಾನಿಕ ವರದಿ ಸೂಚನೆ ಪ್ರಕಾರವೇ ರೈತರಿಗೆ ಸಾಲ ನೀಡುವ ವ್ಯವಸ್ಥೆಯಾಗಲಿದೆ. ಬೀಜ ಮತ್ತು ರಸಗೊಬ್ಬರ ಪೂರೈಕೆಯ ಅಡೆತಡೆ ನಿವಾರಣೆ, ಉತ್ಪಾದನಾ ವೆಚ್ಚ ತಗ್ಗಿಸಿ ಲಾಭ ಹೆಚ್ಚಿಸುವಂತಹ ನೀತಿ ಜಾರಿಗೆ ತರಲಾಗುವುದು ಎಂದು ಘೋಷಿಸಿದರು.
ವರದಿಗೆ ಸೂಚನೆ
ಹಲವು ದೇಶಗಳಲ್ಲಿ ಹವಾಮಾನ, ಮಣ್ಣಿನ ಗುಣ, ಮಳೆ ಮುನ್ಸೂಚನೆ, ಮಾರುಕಟ್ಟೆ ಏರಿಳಿತದ ಅಧ್ಯಯನದ ವರದಿ ಆಧರಿಸಿ ಆಯಾ ಬೆಳೆಯ ಬೆಲೆ ಮುನ್ನಂದಾಜು ಪ್ರಕಟಿಸಲಾಗುತ್ತದೆ. ಇದೇ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಉದ್ದೇಶದಿಂದ ಕಳೆದ 10 ವರ್ಷಗಳ ಮಾರುಕಟ್ಟೆಗಳಲ್ಲಿ ಬೆಲೆ ಏರಿಳಿತದ ಅಧ್ಯಯನ ಮಾಡಿ ಬೆಳೆ ಮುನ್ನಂದಾಜು ವರದಿ ಸಲ್ಲಿಸಲು ತಜ್ಞರಿಗೆ ಸೂಚಿಸಿರುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳೆಗೆ ಬೆಲೆ ಮುನ್ನಂದಾಜು ನಿಗದಿಪಡಿಸಿದರೆ ಅದರ ಮಿತಿಯೊಳಗೆ ಖರ್ಚು ಮಾಡಲು ರೈತರಿಗೆ ಸಹಾಯವಾಗಲಿದ್ದು, ಅನಗತ್ಯ ವೆಚ್ಚ ಮಾಡಿ ನಷ್ಟ ಅನುಭವಿಸುವುದು ತಪ್ಪಲಿದೆ ಎಂದು ತಮ್ಮ ಆಲೋಚನಾ ಕ್ರಮವನ್ನು ಬಿಚ್ಚಿಟ್ಟರು.
ಸುಸ್ಥಿರ ಕೃಷಿಗೆ ಮಣ್ಣಿನ ಫಲವತ್ತತೆ ಸಂರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ. ಸಾವಿರಾರು ವರ್ಷಗಳಿಂದ ಮಣ್ಣಿಗೆ ಬೆವರು ಸುರಿಸಿ ಅನ್ನ ಬೆಳೆದು ರೈತನಿಗೆ ಮಣ್ಣಿನ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ರೈತನ ಅನುಭವದ ಮುಖೇನ ಮಣ್ಣಿನ ಸಂರಕ್ಷಣೆ, ಸಮೃದ್ಧ ಬದುಕಿಗೆ ಅವಕಾಶ ಕಲ್ಪಿಸುವ ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಶ್ಲಾಘನೆ
ಕೃಷಿ ಮೇಳದ ಮೂಲಕ ಹೊಸ ತಳಿ, ತಂತ್ರಜ್ಞಾನ, ಪದ್ಧತಿ ಪರಿಚಯಿಸುವ ಜತೆಗೆ, ಮಾರುಕಟ್ಟೆ ಬಗ್ಗೆ ತಿಳಿವಳಿಕೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಬಾರಿ 2-3 ಲಕ್ಷ ರೈತರು ಭಾಗಿಯಾಗಿರುವ ಮಾಹಿತಿಯಿದ್ದು, ಈ ಸಲವೂ ರೈತರು ನಿರೀಕ್ಷೆಗೆ ಮೀರಿ ಸ್ಪಂದಿಸುವ ವಿಶ್ವಾಸವಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಈ ಮೇಳಕ್ಕೆ ಸಾರಥ್ಯ ನೀಡಿರುವ ವಿಆರ್‌ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ಡಾ.ವಿಜಯ ಸಂಕೇಶ್ವರ, ಈ ಪರಿಕಲ್ಪನೆ ಕಟ್ಟಿಕೊಟ್ಟ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಜತೆಗೆ ಶಿವ ಸಂಕೇಶ್ವರ ಎಳೆಯ ವಯಸ್ಸಿನಲ್ಲಿ ದೊಡ್ಡ ಆಸಕ್ತಿ ತೋರಿಸಿರುವುದು ಅಚ್ಚರಿ ಜತೆಗೆ ಸಂತಸ ತಂದಿದೆ ಎಂದು ಶ್ಲಾಘಿಸಿದರು.
ಸಚಿವರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ರೂಪಾ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯಶಸ್ವಿ ಸೋಮಶೇಖರ, ಫ್ರೀಡಂ ಆ್ಯಪ್ ಸಂಸ್ಥಾಪಕ ಸಿ.ಎಸ್.ಸುಧೀರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ಆಯುಕ್ತ ಬಿ.ರಮೇಶ್ ಇನ್ನಿತರರು ಇದ್ದರು.


31ರಂದು ರೈತ ಶಕ್ತಿ ಯೋಜನೆಗೆ ಚಾಲನೆ
ರೈತರಿಗೆ ಕೃಷಿ ಯಾಂತ್ರೀಕರಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಡೀಸೆಲ್‌ಗೆ ಸಹಾಯಧನ ನೀಡುವ ‘ರೈತ ಶಕ್ತಿ ಯೋಜನೆ’ಗೆ ಜ. 31ರಂದು ಚಾಲನೆ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಪ್ರತಿ ಹೆಕ್ಟೇರ್‌ಗೆ 250 ರೂ.ನಂತೆ ಗರಿಷ್ಠ ಐದು ಹೆಕ್ಟೇರ್‌ವರೆಗೆ 1,250 ರೂ. ಡೀಸೆಲ್ ಸಹಾಯಧನ ನೀಡಲಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ. ಇದಕ್ಕಾಗಿ 2022-23ನೇ ಸಾಲಿನ ಮುಂಗಡಪತ್ರದಲ್ಲಿ 500 ಕೋಟಿ ರೂ. ಕಾದಿಟ್ಟಿರುವೆ ಎಂದು ಹೇಳಿದರು.
ಫ್ರೂಟ್ಸ್ ಆ್ಯಪ್ ಮೂಲಕ ರೈತರ ದತ್ತಾಂಶಗಳು ಸಂಗ್ರಹವಾಗಿದ್ದು, ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ರೈತ ಶಕ್ತಿ ಸಹಾಯಧನದ ಮೊತ್ತ ಜಮೆಯಾಗಲಿದೆ ಎಂದರು.
ರೈತ ಸಹಕಾರಿ ಸದಸ್ಯರ ಅಪೇಕ್ಷೆಯಂತೆ ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಲಾಗಿದೆ. ಈಗಾಗಲೇ 36 ಲಕ್ಷ ರೈತ ಸದಸ್ಯರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದು, ಬಜೆಟ್‌ನಲ್ಲಿ 300 ಕೋಟಿ ರೂ. ಮೀಸಲಿದೆ. ಹಿಂದಿನ ಯೋಜನೆಯಲ್ಲಿದ್ದ ಮಾರ್ಗಸೂಚಿ ಪೈಕಿ ಕೆಲವು ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದರು.


ಹಸಿರು ಶಾಲು ಬೀಸಿ ಹರ್ಷ
ಕೃಷಿ ಮೇಳದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಗ್ರಾಮೀಣ ಪರಂಪರೆ ಹಾಸುಹೊಕ್ಕಾಗಿ, ಕೃಷಿ ಚಟುವಟಿಕೆಗಳನ್ನು ಒಳಗೊಂಡಿದ್ದು ಅಪಾರ ಪ್ರಮಾಣದಲ್ಲಿ ನೆರೆದಿದ್ದ ರೈತ ವರ್ಗದ ಮನಸೂರೆಗೊಂಡಿತು. ಸಿಎಂ ಬೊಮ್ಮಾಯಿ ಮತ್ತಿತರ ಅತಿಥಿಗಳು ವಿವಿಧ ಬೆಳೆಗಳ ಸಸಿ ಮಾದರಿ ನಾಟಿ, ರಾಶಿ ಮಾಡುವ ಮೂಲಕ ಉದ್ಘಾಟಿಸುವ ವೇಳೆ ರೈತ ಸಮೂಹ ಎದ್ದು ನಿಂತು ಹಸಿರು ಶಾಲು ಬೀಸಿ ಹರ್ಷೋದ್ಗಾರ ವ್ಯಕ್ತಪಡಿಸಿತು.

ಮುನ್ನಾ ದಿನವೇ ಜನ್ಮದಿನದ ಶುಭ ಹಾರೈಕೆ
ಜ.28 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನ್ಮದಿನ. ಮುನ್ನಾ ದಿನವೇ ಕೃಷಿ ಮೇಳ ಉದ್ಘಾಟನೆಗೆ ಆಗಮಿಸಿದ್ದ ಬೊಮ್ಮಾಯಿ ಅವರಿಗೆ ಉದ್ಘಾಟನಾ ಸಮಾರಂಭದ ಬಳಿಕ ಪುಷ್ಪಗುಚ್ಛ ನೀಡಿ ಶುಭ ಹಾರೈಸಲಾಯಿತು.
ವಿಜಯಾನಂದ ಟ್ರಾವೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ದಿಗ್ವಿಜಯ ನ್ಯೂಸ್ ಸಂಪಾದಕ ಸಿದ್ದು ಕಾಳೋಜಿ ಜಂಟಿಯಾಗಿ ಹೂಗುಚ್ಛ ನೀಡಿದಾಗ ಬೊಮ್ಮಾಯಿ ಪ್ರೀತ್ಯಾದರಗಳಿಗೆ ಸಂತಸ ವ್ಯಕ್ತಪಡಿಸಿದರು.
ಪುರವಣಿ ಬಿಡುಗಡೆ:
ಕೃಷಿ ಮೇಳದ ನಿಮಿತ್ತ ವಿಜಯವಾಣಿ ಹೊರತಂದ ‘ನೇಗಿಲ ಯೋಗಿ’ ವಿಶೇಷ ಪುರವಣಿಯನ್ನು ಸಿಎಂ ಬೊಮ್ಮಾಯಿ ಬಿಡುಗಡೆ ಮಾಡಿದರೆ, ಸಚಿವರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್ ಇನ್ನಿತರರು ಸಾಥ್ ನೀಡಿದರು.

ಸಹಯೋಗ, ಸಹಕಾರ
ವಿಜಯವಾಣಿ, ದಿಗ್ವಿಜಯ ನ್ಯೂಸ್ ಆಯೋಜಿಸಿರುವ ಮೂರು ದಿನಗಳ ಕೃಷಿ ಮೇಳಕ್ಕೆ ರಾಜ್ಯ ಸರ್ಕಾರ, ಮೈಸೂರು ವಿವಿ ಸಹಯೋಗ ನೀಡಿದ್ದರೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೆಎಂಎಫ್, ಕನ್ನಡ ಮತ್ತು ಸಂಸ್ಕೃತಿ, ಫ್ರೀಡಂ ಆ್ಯಪ್, ಬೆಳಗಾವಿಯ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೈಸೂರು ಮಹಾನಗರ ಪಾಲಿಕೆ, ಕೃಷಿ, ತೋಟಗಾರಿಕೆ, ಪಶುಪಾಲನಾ ಇಲಾಖೆ, ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರ ಸಹಕರಿಸಿವೆ.

ಕೂಲಿಕಾರರ ಶ್ರಮ ಮತ್ತು ರೈತರ ಬೆವರಿನಲ್ಲಿ ದೇವರಿದ್ದಾನೆ ಎಂದು ರವೀಂದ್ರನಾಥ ಟಾಗೋರ್ ಹೇಳಿದಂತೆ, ರೈತರ ಬಗ್ಗೆ ಸರ್ಕಾರ ಉದಾರ ಭಾವನೆ ಹೊಂದಿದೆ. ಆಹಾರ ಭದ್ರತೆ ಒದಗಿಸಿದ ರೈತನ ಬದುಕು ಅನಿಶ್ಚಿತತೆಯಿಂದ ಕೂಡಿದ್ದು, ಆತನ ಸ್ವಾವಲಂಬಿ ಹಾಗೂ ಸುಸ್ಥಿರ ಬದುಕಿಗೆ ಮುಂದಿನ ಬಜೆಟ್‌ನಲ್ಲಿ ಮಹತ್ವ ನೀಡಲಾಗುವುದು.
ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net