

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ನಗರದ ಜನತೆ 2023-24 ಆಯವ್ಯಯಕ್ಕೆ ಅತ್ಯುತ್ತಮ ಸಲಹೆ ನೀಡಿದ್ದು, ಅವುಗಳನ್ನು ಪರಿಗಣಿಸಿ ಮುಂದಿನ ಆರ್ಥಿಕ ವರ್ಷಕ್ಕೆ ಉತ್ತಮವಾದ ಬಜೆಟ್ ಮಂಡಿಸಿ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಳೆದ ವರ್ಷ ನಗರಸಭೆ ಆದಾಯ 43.33 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಡಿಸೆಂಬರ್ ಕೊನೆವರೆಗೆ 34 ಕೋಟಿ ರೂ. ಸಂಗ್ರಹವಾಗಿದ್ದು, ಏಪ್ರಿಲ್ ವೇಳೆಗೆ ನಿಗದಿತ ಗುರಿ ತಲುಪಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವರ್ಷದಲ್ಲಿ ನಗರಕ್ಕೆ ವಿಶೇಷ ಅನುದಾನದಲ್ಲಿ 60 ಕೋಟಿ ರೂ. ಮತ್ತು ಅಮೃತ್ ಯೋಜನೆಯ 2ರಲ್ಲಿ 30 ಕೋಟಿ ರೂ. ಬಿಡುಗಡೆ ಮಾಡಿದ್ದು, ಈಗಾಗಲೇ ನಗರದ ಕೆ.ಆರ್. ರಸ್ತೆ ಸೇರಿ ವಿವಿಧ ರಸ್ತೆಗಳ ಅಭಿವೃದ್ದಿ ಕಾರ್ಯ ಪ್ರಾರಂಭವಾಗಿದೆ. ಸಂಕ್ರಾಂತಿ ನಂತರ ಅಮೃತ್ ಯೋಜನೆಯಲ್ಲಿ 12 ಕೋಟಿ ರೂ. ಕಾಮಗಾರಿ ಪ್ರಾರಂಭವಾಗುತ್ತದೆ ಎಂದರು.
ಕಳೆದ ವರ್ಷದಲ್ಲಿ ಸ್ಥಳೀಯ ಶಾಸಕರು, ಕೇವಲ 5 ಲಕ್ಷ ರೂ.ಗಳನ್ನು ನಗರದ ಅಭಿವೃದ್ಧಿಗೆ ಬಿಡುಗಡೆ ಮಾಡಿಸಿದ್ದರು. ಆದರೆ ಈ ಹಣವನ್ನು ಅವರ ಸದಸ್ಯರು ಇರುವ ವಾರ್ಡ್‌ಗಳಿಗೆ ಮಾತ್ರ ನೀಡಿದ್ದಾರೆ ಎಂದು ಆರೋಪಿಸಿದರು.
ಕಂದಾಯ ನಿಗದಿ: ನಗರಸಭೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಈವರೆಗೆ ಇ-ಖಾತೆ ಮಾಡಿಸದೆ ಕಂದಾಯ ಕಟ್ಟದಿರುವ ಅನೇಕ ಮನೆಗಳು ಮತ್ತು ವಾಣಿಜ್ಯ ನಗರದಲ್ಲಿದ್ದು, ಅವುಗಳಿಗೆ ಕಂದಾಯವನ್ನು ನಿಗದಿ ಪಡಿಸಬೇಕು. ನಗರದಲ್ಲಿರುವ ಎಲ್ಲ ನೀರಿನ ಕೊಳಾಯಿಗಳನ್ನು ಅಧಿಕೃತ ಮಾಡಿ ಅದರಿಂದ ತೆರಿಗೆ ಸಂಗ್ರಹ ಮಾಡಿದರೆ ಮತ್ತಷ್ಟು ಧನ ಸಂಗ್ರಹವಾಗಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದು ಹಲವರು ಸಲಹೆ ನೀಡಿದ್ದು, ಅದನ್ನು ಪರಿಗಣಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಮುಂದಿನ ಆಯವ್ಯಯದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಸ್ಥಳವನ್ನು ನಿಗದಿ ಪಡಿಸಿ, ಸೌಕರ್ಯ ನೀಡುವಂತೆ ಮನವಿ ಬಂದಿದ್ದು, ಬೀದಿ ನಾಯಿಗಳ ಹಾವಳಿ ತಪ್ಪಿಸುವ ಸಲುವಾಗಿ ಅನಧಿಕೃತ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಪ್ಲಾಸ್ಟಿಕ್‌ಮುಕ್ತ ನಗರಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಬಂದಿದ್ದು, ಎಲ್ಲವನ್ನೂ ಬಜೆಟ್‌ನಲ್ಲಿ ಅನುಷ್ಠಾನ ಮಾಡಲಾಗುವುದು ಎಂದರು.
ಕೆಇಬಿ ಸಹಾಯಕ ಅಭಿಯಂತ ಪುಟ್ಟಸ್ವಾಮಿ, ಪೊಲೀಸ್ ಪೇದೆ ಪ್ರಭು ಇದ್ದರು.
11-ಮಂಜುನಾಥ್-ಹೊಸಕೋಟೆ-01
ಹೊಸಕೋಟೆ ನಗರಸಭೆಯಲ್ಲಿ 2023-24 ರ ಆಯವ್ಯಯ ಮಂಡನೆ ಬಗ್ಗೆ ಬುಧವಾರ ಹಮ್ಮಿಕೊಂಡಿದ್ದ ಪೂರ್ವಬಾವಿ ಸಭೆಯಲ್ಲಿ ಅಧ್ಯಕ್ಷ ನಾಗರಾಜ್ ಮಾತನಾಡಿದರು. ನಗರಸಭೆ ಆಯುಕ್ತ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ರೋಷನ್ ಇತರರು ಇದ್ದರು.