

ವಿಕ್ರಮ ನಾಡಿಗೇರ ಧಾರವಾಡ
ರಾಜ್ಯ ಸರ್ಕಾರ ಮಾರ್ಚ್ 7ರಂದು 2025-26ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದೆ. ಪ್ರತಿ ವರ್ಷ ಆಯವ್ಯಯದಲ್ಲಿ ಅನೇಕ ಹೊಸ ಹೊಸ ಯೋಜನೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗುತ್ತದೆ. ಆದರೆ, ಬೆರಳೆಣಿಕೆಯಷ್ಟು ಯೋಜನೆಗಳು ಮಾತ್ರ ಜಾರಿಗೆ ಬರುತ್ತವೆ. 2024-25ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ಧಾರವಾಡ ಜಿಲ್ಲೆಗೆ ಘೋಷಿಸಿದ ಯೋಜನೆಗಳ ಕಥೆಯೂ ಅದೇ ಆಗಿದೆ.
2024-25ನೇ ಆಯವ್ಯಯದಲ್ಲಿ ಜಿಲ್ಲೆಗೆ ಕೆಲ ಯೋಜನೆಗಳನ್ನು ಘೋಷಿಸಲಾಗಿತ್ತು. ಅವುಗಳಲ್ಲಿ ವಾಲ್ಮಿ ಸಂಸ್ಥೆಯನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವಾಟರ್ ಮ್ಯಾನೇಜ್ವೆುಂಟ್ ಆಗಿ ಉನ್ನತೀಕರಣ, ಬೆಣ್ಣಿಹಳ್ಳ ಪ್ರವಾಹದಿಂದ ಪೀಡಿತವಾಗುವ ಗ್ರಾಮಗಳ ಜನಜೀವನ ರಕ್ಷಣೆಗೆ ತಡೆಗೋಡೆಗಳ ನಿರ್ವಣ, 20 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಡೇ ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪನೆ, ಹುಬ್ಬಳ್ಳಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ ಹಾಗೂ ಹುಬ್ಬಳ್ಳಿ ಕೃಷಿ ಮಾರುಕಟ್ಟೆಯನ್ನು ಶೂನ್ಯ ತ್ಯಾಜ್ಯ ಮಾರುಕಟ್ಟೆಯಾಗಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್ಜಿ ಪ್ಲಾಂಟ್ ಸ್ಥಾಪನೆ ಮಾಡುವುದು ಪ್ರಮುಖ ಘೋಷಣೆಗಳಾಗಿದ್ದವು.
ಈ ಯಾವ ಘೋಷಣೆಗಳೂ ಪೂರ್ಣಪ್ರಮಾಣದಲ್ಲಿ ಕಾರ್ಯಾನುಷ್ಠಾನಕ್ಕೆ ಬಂದಿಲ್ಲ. ಕೆಲವು ಕಾರ್ಯರೂಪಕ್ಕೆ ಬಂದಿದ್ದರೂ ಅನುದಾನ ಕೊರತೆ ಎದುರಿಸುತ್ತಿವೆ. ಇನ್ನೂ ಕೆಲವು ಜಾರಿಗೆ ಬರುವಲ್ಲೇ ವಿಳಂಬವಾಗಿವೆ. ಸರ್ಕಾರ ಘೋಷಿಸಿದ ಯೋಜನೆಗಳು ಸಮಯಕ್ಕೆ ಸರಿಯಾಗಿ ಕಾರ್ಯರೂಪಕ್ಕೆ ಬಂದಿವೆಯೇ? ಎಂದು ಗಮನಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ, ಬಜೆಟ್ ಸಮಯದಲ್ಲಿ ಜಿಲ್ಲೆಗೆ ಯೋಜನೆ ಘೋಷಣೆ ಮಾಡಿಸಿದ್ದೇನೆ ಎಂದು ಕ್ರೆಡಿಟ್ ಪಡೆಯಲು ಹರಸಾಹಸ ಪಡುವ ಶಾಸಕರು, ನಂತರದಲ್ಲಿ ಅವುಗಳ ಬಗ್ಗೆ ಲಕ್ಷ್ಯ ವಹಿಸುತ್ತಿಲ್ಲ ಎನ್ನುವುದಕ್ಕೆ ಇದು ನಿದರ್ಶನ.
ಕಳೆದ ವರ್ಷ ಘೋಷಣೆ ಮಾಡಿದಂತೆ ವಾಲ್ಮಿ ಸಂಸ್ಥೆ ಉನ್ನತೀಕರಣಕ್ಕೆ ಅದರ ನಿರ್ದೇಶಕ ಬಸವರಾಜ ಬಂಡಿವಡ್ಡರ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡುವ ಭರವಸೆ ಅವರಲ್ಲಿ ಮೂಡಿದೆ. ಇದರ ಜತೆಗೆ ಜಲ ವಿಶ್ವ ವಿದ್ಯಾಲಯ ಸ್ಥಾಪನೆಗೆ ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಕಿಮೋಥೆರಪಿ ಕೇಂದ್ರ ಸ್ಥಾಪನೆ ಸಹ ವಿಳಂಬವಾಗಿದೆ. ಕೇಂದ್ರ ಸ್ಥಾಪನೆಗೆ ಟೆಂಡರ್ ಕರೆಯಲಾಗಿತ್ತು. ಆದರೆ, ಯಾರೊಬ್ಬರೂ ಪಾಲ್ಗೊಂಡಿಲ್ಲ. ಹೀಗಾಗಿ ಇದೀಗ ಖಾಸಗಿಯಾಗಿ ಅಥವಾ ಸರ್ಕಾರಿ ವೈದ್ಯಕೀಯ ಸಂಸ್ಥೆಗಳೊಂದಿಗೆ ಒಡಂಬಡಿಕೆ (ಎಂಓಯು) ಮೂಲಕ ಕೇಂದ್ರ ಸ್ಥಾಪನೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಚಿಸಿದೆ. ಇನ್ನೂ 10-15 ದಿನಗಳಲ್ಲಿ ಒಡಂಬಡಿಕೆ ಪ್ರಕ್ರಿಯೆ ಪೂರ್ಣವಾಗಲಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ.
ಒಂದು ವರ್ಷದ ಹಿಂದೆ ಸರ್ಕಾರ ಮಂಡಿಸಿದ ಆಯವ್ಯಯದಲ್ಲಿ ಘೋಷಣೆಯಾದ ಯೋಜನೆಗಳೇ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಇದೀಗ ಮತ್ತೊಂದು ಬಜೆಟ್ ಮಂಡನೆಗೆ ಸರ್ಕಾರ ಮುಂದಾಗಿದೆ. ಇದರಲ್ಲೂ ಹಲವು ಘೋಷಣೆಗಳಾಗಲಿವೆ. ಈ ಎರಡೂ ಬಜೆಟ್ಗಳಲ್ಲಿನ ಯೋಜನೆಗಳನ್ನು ಸರ್ಕಾರ ಮುತುವರ್ಜಿ ವಹಿಸಿ ಜಾರಿಗೆ ತರುವಲ್ಲಿ ಪ್ರಯತ್ನಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.
ಬೆಣ್ಣಿಹಳ್ಳ ಪ್ರವಾಹದಿಂದ ಪೀಡಿತವಾಗುವ ಗ್ರಾಮಗಳ ಜನ ಜೀವನ ರಕ್ಷಣೆಗೆ ತಡೆಗೋಡೆಗಳ ನಿರ್ಮಾಣ ಕಾರ್ಯವೂ ಆರಂಭವಾಗಿಲ್ಲ. ಕಾಮಗಾರಿ ಆರಂಭಿಸಲು ಟೆಂಡರ್ ಕರೆಯಲಾಗಿದ್ದು, ಕೆಲ ದಿನಗಳಲ್ಲಿ ಆದ್ಯತೆ ಮೇರೆಗೆ (ಹೆಚ್ಚು ಹಾನಿಗೀಡಾಗುವ ಪ್ರದೇಶಗಳಲ್ಲಿ ಮೊದಲು) ಆರಂಭವಾಗಲಿದೆ. ಇನ್ನು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೌಶಲ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದ ಯಾವ ಪ್ರಕ್ರಿಯೆ ಸಹ ನಡೆದಿಲ್ಲ.
ಹುಬ್ಬಳ್ಳಿ ಎಪಿಎಂಸಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬಯೋ ಸಿಎನ್ಜಿ ಪ್ಲಾಂಟ್ಗೆ ಕೃಷಿ ಮಾರಾಟ ಇಲಾಖೆಯ ಕೇಂದ್ರ ಕಚೇರಿಯಿಂದಲೇ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಈ ಅವಧಿಯಲ್ಲೇ ಘೋಷಣೆ ಮಾಡಿರುವ ಉಳಿದ ಜಿಲ್ಲೆಗಳಿಗೆ ಅನುಮೋದನೆ ಸಿಕ್ಕಿದೆ. ಆದರೆ, ಹುಬ್ಬಳ್ಳಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಮೇರು ನಂದನ ತಿಳಿಸಿದ್ದಾರೆ.
ವಾಲ್ಮಿ ಸಂಸ್ಥೆಯನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವಾಟರ್ ಮ್ಯಾನೇಜ್ವೆುಂಟ್ ಆಗಿ ಉನ್ನತೀಕರಣ ಮಾಡಲು ಕಳೆದ ಬಜೆಟ್ನಲ್ಲಿ ಘೋಷಿಸಲಾಗಿದೆ. ಅದಕ್ಕೆ ತಕ್ಕಂತೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಜತೆಗೆ ಇದನ್ನು ಜಲ ವಿಶ್ವ ವಿದ್ಯಾಲಯವನ್ನಾಗಿ ಘೋಷಿಸಲು ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವರ್ಷದ ಬಜೆಟ್ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಜತೆಗೆ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವಾಟರ್ ಮ್ಯಾನೇಜ್ವೆುಂಟ್ಗೆ ಸಹ ಅನುದಾನ ಘೋಷಿಸುವ ಸಾಧ್ಯತೆ ಇದೆ. ಬಸವರಾಜ ಬಂಡಿವಡ್ಡರ, ವಾಲ್ಮಿ ನಿರ್ದೇಶಕ