

ಬೀದರ್: ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದು ಖುಷಿ ತಂದಿದೆ ಎಂದು ಪದವೀಧರ ವಿದ್ಯಾರ್ಥಿ ಇಮ್ರಾನ್ ಖಾನ್ ಕಪಲಾಪುರ ತಿಳಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆಗ ಕ್ರಮ, ಸ್ಥಳೀಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಿಕತೆಯನ್ನು ಆಧರಿಸಿ ಹೊಸ ಶಿಕ್ಷಣ ನೀತಿ ರೂಪಿಸಲು ಕ್ರಮವಹಿಸಿದ್ದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ನೀಡುವ ಪೌಷ್ಟಿಕ ಆಹಾರಕ್ಕಾಗಿ 280 ಕೋಟಿ ರೂ. ಅನುದಾನ ಒದಗಿಸಲಾಗಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ನಿರ್ವಹಣಾ ವೆಚ್ಚ 45 ಸಾವಿರ ರೂ.ಗೆ ಹೆಚ್ಚಳ ಮಾಡಿದ್ದು ಖುಷಿ ತಂದಿದೆ ಎಂದು ಹೇಳಿದ್ದಾರೆ.
ಶಾಲೆ, ಕಾಲೇಜುಗಳ ಕೊಠಡಿಗಳ ನಿರ್ಮಾಣ, ದುರಸ್ತಿಗೆ 650 ಕೋಟಿ ರೂ. ಹಾಗೂ ಶೌಚಗೃಹ ಘಟಕ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ನೀಡಲಾಗಿದೆ. ನಾಡಿನ ಯುವ ಜನತೆಗೆ ಆರ್ಥಿಕ ನೆರವು ನೀಡಿ ಆತ್ಮವಿಶ್ವಾಸ ತುಂಬಿ ಬದುಕಿನಲ್ಲಿ ನೆಲೆ ಕಂಡುಕೊಳ್ಳಲು ಸಹಾಯವನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ.