

ಬೀದರ್: 2021-22ನೇ ಸಾಲಿನ ಬಜೆಟ್ ನಲ್ಲಿ ಬೀದರ್ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಆದ್ಯತೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಆಗ್ರಹಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಭೇಟಿಯಾಗಿ ಮನವಿ ಸಲ್ಲಿಸಿ, ಬಜೆಟ್ ನಲ್ಲಿ ಬೀದರ್ ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ನೀಡಿ ಸಾರ್ವಜನಿಕರ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಗೆ ಕೃಷಿ ಮಹಾವಿದ್ಯಾಲಯ ಮಂಜೂರು ಮಾಡಬೇಕು. 2017ರಲ್ಲಿ ಮಂಜೂರಾಗಿರುವ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯವು ಬರುವ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಬೇಕು. ರಾಜ್ಯದ ಏಕೈಕ ಪಶು ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ 400 ಕೋಟಿ ಅನುದಾನ ನೀಡಬೇಕು ಎಂದು ಕೋರಿದ್ದಾರೆ.
ಔರಾದ್ ತಾಲೂಕಿನಲ್ಲಿ ಮಹಿಳಾ ಐಟಿಐ ಕಾಲೇಜು ಪ್ರಾರಂಭಿಸಬೇಕು. ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ) ಗ್ರಾಮದಲ್ಲಿ ಪದವಿ ಕಾಲೇಜು ಮಂಜೂರಾತಿ ಮಾಡಬೇಕು. ಕರೇಜ್ (ಸುರಂಗ ಭಾವಿ) ಉತ್ತೇಜನಕ್ಕಾಗಿ ಅನುದಾನ ನೀಡಬೇಕು. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ) ಆರಂಭಿಸಲು ರೂ. 30 ಕೋಟಿ ಅನುದಾನ ನೀಡಬೇಕು. ಬೀದರ್ ನಗರಕ್ಕೆ ಜನವಾಡ ಮೂಲಕ ಸರಬರಾಜು ಆಗುವ ನೀರು ಯೋಜನೆಯನ್ನು ಪ್ರಾರಂಭಿಸಬೇಕು. ಔರಾದ್ ತಾಲೂಕಿನಲ್ಲಿ ಸೋಲಾರ್ ವಿದ್ಯುತ ಘಟಕ ನಿರ್ಮಾಣ ಮಾಡಬೇಕು. ಜಿಲ್ಲೆಯ ಪೊಲೀಸರಿಗಾಗಿ ವಸತಿ ಗೃಹ ನಿರ್ಮಾಣ ಮಾಡಲು ಅನುದಾನ ಹಾಗೂ ಮಂಜೂರಾತಿ ನೀಡಬೇಕು. ಜಿಲ್ಲೆಗೆ ಮಂಜೂರಾದ ಮಹಿಳಾ ಪೊಲೀಸ್ ತರಬೇತಿ ಕೇಂದ್ರದ ಕಟ್ಟಡಕ್ಕೆ ಅನುದಾನ ನೀಡಬೇಕು ಎಂದು ಹೇಳಿದ್ದಾರೆ.
ಈಶಾನ್ಯ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕ ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ಮಂಜೂರಾತಿ ಮಾಡಬೇಕು. ರೇಷ್ಮೆ ಮಾರಾಟ ಮತ್ತು ಖರೀದಿ ಕೇಂದ್ರ ಸ್ಥಾಪಿಸಬೇಕು. ಹೊಸದಾಗಿ ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜನ್ನು ಬೀದರ್ ಅಥವಾ ಬಸವಕಲ್ಯಾಣದಲ್ಲಿ ನಿರ್ಮಿಸಲು ಮಂಜೂರಾತಿ ನೀಡಬೇಕು. ಸ್ಥಗಿತವಾಗಿರುವ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಪ್ರಾರಂಭಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಸಂಬಂಧ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.