ಬಜರಂಗದಳದಿಂದ ರಕ್ತದಾನ ಶಿಬಿರ

Bajarang Dal
Published on

ಬೀದರ್: ಭಜರಂಗ ದಳ ಮತ್ತು ಕೇಶವ ಸಂವರ್ಧನ ಕಾರ್ಯ ಸಮಿತಿಯಿಂದ ಶ್ರೀರಾಮ ಜನ್ಮ ಭೂಮಿ ಹೋರಾಟದ ಬಲಿದಾನ ಸ್ಮರಣೆಯ ನಿಮಿತ್ತ ಸೋಮವಾರ ನಗರದಲ್ಲಿ ರಕ್ತದಾನ ಶಿಬಿರ ಜರುಗಿತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ವಿಶ್ವ ಹಿಂದು ಪರಿಷತ್ (ವಿಎಚ್.ಪಿ) ಜಿಲ್ಲಾ ಅಧ್ಯಕ್ಷ ಎಸ್.ರಾಮಕೃಷ್ಣನ್, ತಾಯಿ ಭಾರತಾಂಬೆ ರಕ್ಷಣೆ ಹಾಗೂ ಪವಿತ್ರ ಹಿಂದು ಧರ್ಮ, ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಇದು ಎಲ್ಲಕ್ಕಿಂತಲೂ ಶ್ರೇಷ್ಠ ಸೇವೆಯಾಗಿದೆ ಎಂದು ಹೇಳಿದರು.

ಸೇವೆ, ಸುರಕ್ಷೆ ಮತ್ತು ಸಂಸ್ಕಾರಗಳನ್ನು ಧ್ಯೇಯವಾಗಿಸಿಕೊಂಡು ಕೆಲಸ ಮಾಡುತ್ತಿರುವ ಭಜರಂಗ ದಳಕ್ಕೆ 36 ವರ್ಷ ಸಂದಿದೆ. ಸಂಘಟನೆಯಿಂದ ನಿರಂತರ ವಿವಿಧ ಸಾಮಾಜಿಕ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಅಯೋಧ್ಯೆ ಬಾಬರಿ ಮಸೀದಿ ಧ್ವಂಸ ವೇಳೆ ಅನೇಕರು ಬಲಿದಾನಗೊಂಡಿದ್ದಾರೆ. ಸಹಸ್ರಾರು ಜನರ ರಕ್ತದ ಕೋಡಿ ಹರಿದಿದೆ. ಅಂಥ ಹುತಾತ್ಮರ ಸ್ಮರಣೆಗಾಗಿ ಪ್ರತಿ ವರ್ಷ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ. ಪ್ರಸ್ತುತ ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ರಕ್ತ ಕೇಂದ್ರಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಕಡೆಗಳಲ್ಲಿ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಭಜರಂಗ ದಳ ಜಿಲ್ಲಾ ಸಂಯೋಜಕ ಸುನೀಲ ದಳವೆ ಮಾತನಾಡಿ, ರಾಷ್ಟ್ರ ಸೇವೆ ಧ್ಯೇಯವಾಗಿಸಿಕೊಂಡು ಕೆಲಸ ಮಾಡುತ್ತಿರುವ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರಬೇಕು ಎಂದು ಮನವಿ ಮಾಡಿದರು. ಶಿಬಿರದಲ್ಲಿ 60ಕ್ಕೂ ಅಧಿಕ ಯುವಕರು ರಕ್ತದಾನ ಮಾಡಿದರು. ಡಾ. ಕಲ್ಪನಾ ದೇಶಪಾಂಡೆ, ಸತೀಶಕುಮಾರ ನೌಬಾದೆ, ಅಶೋಕ ಮಾನೂರೆ, ಮಹೇಶ ಕಟ್ಟೆ, ಆಕಾಶ ಗುತ್ತೆದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net