ಬಚ್ಚೇಗೌಡ ಕುಟುಂಬಕ್ಕೆ ಎಂಟಿಬಿ ಪಂಥಾಹ್ವಾನ, ಮಾಧ್ಯಮದ ಮುಂದೆ ಹಗರಣ ಬಿಚ್ಚಿಟ್ಟ ಸಚಿವ, ರಾಜೀನಾಮೆ ನೀಡಿ ಜನರ ಕ್ಷಮೆ ಕೇಳಲು ಪಟ್ಟು

mtb must
Published on

ಬೆಂಗಳೂರು ಗ್ರಾಮಾಂತರ: ಶಾಸಕ ಶರತ್ ಬಚ್ಚೇಗೌಡ ಹಾಗೂ ಸಂಸದ ಬಿ.ಎನ್.ಬಚ್ಚೇಗೌಡ ವಿರುದ್ಧ ಸಿಡಿದೆದ್ದಿರುವ ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಇಬ್ಬರ ವಿರುದ್ಧ ಭೂ ಹಗರಣದ ಗಂಭೀರ ಆರೋಪ ಮಾಡಿದ್ದಾರೆ.

ಹೊಸಕೋಟೆಯ ವಿವಿಧ ಕಡೆ ಗುರುವಾರ ಆಹಾರ ಕಿಟ್ ವಿತರಿಸಿದ ಸಚಿವರು ಸೂಲಿಬೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಂತನಪುರದಲ್ಲಿ ಪರಿಶಿಷ್ಟ ವರ್ಗದವರಿಗೆ ಮಂಜೂರಾಗಿರುವ ಜಮೀನನ್ನು ಬಚ್ಚೇಗೌಡ ಕುಟುಂಬ ಕಬಳಿಸಿರುವ ದಾಖಲೆ ನನ್ನ ಬಳಿ ಇದೆ. ಇದು ಸತ್ಯವಲ್ಲದಿದ್ದರೆ ನಾನೇ ರಾಜೀನಾಮೆ ನೀಡುತ್ತೇನೆ. ಇಲ್ಲದಿದ್ದರೆ ಇಬ್ಬರೂ ರಾಜೀನಾಮೆ ನೀಡಲಿ ಎಂದು ಪಂಥಾಹ್ವಾನ ನೀಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲವೆಂಬ ಕಾರಣಕ್ಕೆ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಹೊರತು ಅಧಿಕಾರಕ್ಕಾಗಿ ಅಂಟಿಕೊಂಡು ಇರಬೇಕೆಂದಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನಾನು ಶಾಸಕನಾಗಿದ್ದಾಗ ಜಮೀನಿಲ್ಲದ ರೈತರು ಹಾಗೂ ಸರ್ಕಾರಿ ಜಮೀನುಗಳಲ್ಲಿ 20-30 ವರ್ಷ ಸಾಗುವಳಿ ಮಾಡುತ್ತಿದ್ದ ಬಡ ರೈತರನ್ನು ಗುರುತಿಸಿ ಸಾಗುವಳಿ ಚೀಟಿ ವಿತರಿಸಿದ್ದೇನೆ. ಬೇಕಾದರೆ ನನ್ನ ಅವಧಿಯಲ್ಲಿ ರೈತರಿಗೆ ನೀಡಲಾಗಿರುವ ಸಾಗುವಳಿ ದಾಖಲೆಗಳನ್ನು ತೆಗೆದು ನೋಡಿಕೊಳ್ಳಲಿ ಎಂದರು.

ಶಾಂತನಪುರ ಸರ್ವೇ ನಂ.9 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 261 ಎಕರೆ ಮಂಜೂರಾಗಿತ್ತು. ಆದರೆ ಈ ಭೂಮಿ ಸಂಸದರ ಕುಟುಂಬದವರ ಸ್ವಾಧೀನದಲ್ಲಿದೆ. ತೆನೆಯೂರು ಸರ್ವೇ ನಂ 37 ರಲ್ಲಿನ 4.37 ಎಕರೆ ಸ್ಮಶಾನ ಜಾಗಕ್ಕೆ ಮೀಸಲಾಗಿತ್ತು. ಈ ಭೂಮಿ ಕಬಳಿಸಿದ್ದಾರೆ ಎಂದು ದೂರಿದರು.

ಇವರಂತೆ ಸರ್ಕಾರಿ ಜಮೀನನ್ನು ಕೊಳ್ಳೆ ಹೊಡೆಯುವ ಕೆಲಸ ನಾನು ಯಾವತ್ತೂ ಮಾಡಿಲ್ಲ, ಮಾಡುವುದೂ ಇಲ್ಲ. ನನ್ನ ಬಳಿ ಎಲ್ಲ ದಾಖಲೆಗಳಿವೆ. ಮಾಧ್ಯಮದ ಮುಂದೆ ನಾನು ಬಹಿರಂಗ ಚರ್ಚೆಗೆ ಬರುತ್ತೇನೆ. ಅವರೂ ಬರಲಿ ಎಂದು ಸವಾಲು ಹಾಕಿದರು.

ಭೂಮಿ ವಾಪಸ್ ಕೊಡಲಿ:

ಶಾಂತನಪುರ ಸರ್ವೇ ನಂ. 9ರ 261 ಎಕರೆ ಜಮೀನು ಖಾತೆ, ಪಹಣಿ ಎಲ್ಲ ಮೂಲ ಮಂಜೂರಿದಾರರಾದ ಬಡ ಪ.ಷ್ಟ ಜಾತಿ/ಪಂಗಡದವರ ಹೆಸರಿನಲ್ಲಿದೆ. ಆದರೆ ಅವರಿಗೆ ಸ್ವಾಧೀನಕ್ಕೆ ಬಿಟ್ಟುಕೊಡದೆ ಶರತ್ ಬಚ್ಚೇಗೌಡ ಕುಟುಂಬದ ಸ್ವಾಧೀನದಲ್ಲಿದೆ. ಈ ಬಗ್ಗೆ ಕೇಳಲು ಹೋದರೆ ಕೈ, ಕಾಲು ಮುರಿಯುತ್ತೇವೆಂದು ಬೆದರಿಸಿ ಕಳಿಸುತ್ತಿದ್ದಾರೆ. ಈಗಾಗಲೇ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ.

ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತಿದ್ದೇನೆ. ತಂದೆ ಮಕ್ಕಳು ರಾಜಕಾರಣ ಜೀವನದಲ್ಲಿದ್ದು, ಬಡವರ ಆಸ್ತಿ ಲಪಟಾಯಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೇನಾದರೂ ಮನುಷ್ಯತ್ವ ಇದ್ದರೆ ಮೊದಲು ಬಡ ದಲಿತರ ಭೂಮಿಯನ್ನು ಲಾನುಭವಿಗಳಿಗೆ ವಾಪಸ್ ಬಿಟ್ಟುಕೊಡಲಿ ಎಂದರು.

ತೆನೆಯೂರು ಸರ್ವೇ ನಂ. 37 ರಲ್ಲಿನ 4.37 ಎಕರೆ ಸ್ಮಶಾನ ಜಮೀನು ಶರತ್ ಬಚ್ಚೇಗೌಡ ಅವರ ದೊಡ್ಡಪ್ಪ ಖಾತೆ ಮಾಡಿಸಿಕೊಂಡು ಅವರಿಂದ ಬಚ್ಚೇಗೌಡ ಹೆಸರಿಗೆ ಖಾತೆ ಮಾಡಿಸಿಕೊಂಡ ಬಳಿಕ ಶರತ್ ಬಚ್ಚೇಗೌಡ ಅವರ ಹೆಸರಿಗೆ ದಾನ ಪತ್ರದ ಮುಖಾಂತರ ಖಾತೆ ಮಾಡಿಸಿಕೊಂಡಿದ್ದಾರೆ. ಹೆಣ ಹೂಳಲು ಮೀಸಲಿರಿಸಿದ್ದ ಜಾಗವನ್ನೇ ಬಿಟ್ಟಿಲ್ಲ ಎಂದು ದೂರಿದ ಅವರು, ಒಂದೇ ಒಂದು ಗುಂಟೆ ಸರ್ಕಾರಿ ಜಾಗ ನನ್ನ ಹೆಸರಿನಲ್ಲಿ ಮಾಡಿಕೊಂಡಿದ್ದರೆ ದಾಖಲೆ ನೀಡಲಿ ರಾಜೀನಾಮೆ ಕೊಡುತ್ತೇನೆ ಎಂದರು.

ಮನೆಯಲ್ಲಿ ಎಂದೂ ಕುಳಿತಿಲ್ಲ: ಕರೊನಾ ಮೊದಲನೇ ಅವಧಿಯಲ್ಲಿ ಇಡೀ ತಾಲೂಕಿನಲ್ಲಿ ಸಂಕಷ್ಟದಲ್ಲಿದ್ದವರಿಗೆ 45 ಸಾವಿರ ಕಿಟ್‌ಗಳನ್ನು ನೀಡಿದ್ದೇವೆ. 15 ದಿನ ಉಚಿತವಾಗಿ ನಂದಗುಡಿ ಮತ್ತು ಹೊಸಕೋಟೆ ಚೌಲ್ಟ್ರಿಯಲ್ಲಿ 2 ಕಡೆ ಅನ್ನದಾಸೋಹ ಮಾಡಿದ್ದೇವೆ. ಈಗಲೂ ಎರಡನೇ ಅಲೆಯಲ್ಲಿ ಕಿಟ್‌ಗಳನ್ನು ಹಾಗೂ ಉಚಿತವಾಗಿ ಅನ್ನದಾಸೋಹ ಮಾಡುತ್ತಿದ್ದೇವೆ. ಇದು ಕ್ಷೇತ್ರದ ಜನತೆಗೆ ಗೊತ್ತಿದೆ, ಯಾರನ್ನೋ ಮೆಚ್ಚಿಸಲು ಮಾಡುತ್ತಿಲ್ಲ ಎಂದು ಎಂಟಿಬಿ ತಿಳಿಸಿದರು.ಕರೊನಾ ಮೊದಲ ಅಲೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ., ಅದಕ್ಕೂ ಮುನ್ನ ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ ಉಂಟಾದ ಸಮಯದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಿದ್ದೇನೆ ಎಂದರು.

ಮಾಧ್ಯಮಗಳ ಮುಂದೆ ನೊಂದವರ ಅಳಲು: 16 ಕುಟುಂಬದ ಪರಿಶಿಷ್ಟ ವರ್ಗದ ನಾವು ಸ್ವಂತ ಮನೆಯಿಲ್ಲದೆ ಗುಡಿಸಲಿನಲ್ಲಿ ಜೀವನ ಮಾಡುತ್ತಿದ್ದೇವೆ. ಬಚ್ಚೇಗೌಡ ಕುಟುಂಬ ಯಾವಾಗಲೂ ಮೋಸ ಮಾಡಿಕೊಂಡು ಬಂದಿದೆ. ನಮ್ಮ ತಾತನವರ ಹೆಸರಿಗೆ 60 ವರ್ಷದ ಹಿಂದೆ 16 ಜನರಿಗೆ ತಲಾ 4 ಎಕರೆಯಂತೆ ಜಮೀನು ಮಂಜೂರಾಗಿದ್ದು, ಬೆಂಡಿಗಾನಹಳ್ಳಿಯ ಬಚ್ಚೇಗೌಡರ ಕುಟುಂಬದವರ ಸ್ವಾಧೀನದಲ್ಲಿದ್ದು, ನಮ್ಮನ್ನು ಬೆದರಿಸುತ್ತಿದ್ದಾರೆ. ನಿಮ್ಮ ಹತ್ತಿರ ಹಣ, ಅಧಿಕಾರ ಇರಬಹುದು, ಈ ಕಾಲದಲ್ಲಿ ಭಯ ಬೀಳುವವರು ಯಾರೂ ಇಲ್ಲ. ಬಡವರಾದ ನಮಗೆ ಯಾವುದೇ ಕಾರಣಕ್ಕೂ ಮೋಸ ಮಾಡಬೇಡಿ. ನಮಗಾಗಿರುವ ನೋವಿಗೆ ನೀವು ಖಂಡಿತ ಅನುಭವಿಸುತ್ತೀರಿ. ನಮ್ಮ ಜಮೀನು ನಮಗೆ ಬಿಟ್ಟುಕೊಡಿ ಎಂದು ಜಮೀನಿನ ಮೂಲ ಮಾಲೀಕರು ಎನ್ನಲಾದ ಕೆಲವರು ಮಾಧ್ಯಮಗಳ ಮುಂದೆ ಅಲವತ್ತುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net