

ಮುಂಬೈ ಮೂಲದ ಬಚ್ಚಾಖಾನ್ ಸುಲೇಮಾನ್ ಖಾದ್ರಿ, ಬೆತ್ತನಗೆರೆ ಶಂಕರ, ಮುನಿರಾಜು ಹನುಮಂತರಾಯಪ್ಪ, ಜಾವೇದ ಶಮಶಾದಅಲಿ ಢಾಲಾಯತ ವಿರುದ್ಧ ಬುಧವಾರ ಅಪರಾಧ ಸಾಬೀತಾಗಿ ತೀರ್ಪು ಕಾಯ್ದಿರಿಸಲಾಗಿತ್ತು. ನ್ಯಾಯಾಧೀಶ ಎಂ. ಪಂಚಾಕ್ಷರಿ ಅವರು ಗುರುವಾರ ತೀರ್ಪು ಪ್ರಕಟಿಸಿದರು.
ಮೊದಲ ಆರೋಪಿ ಬಚ್ಚಾಖಾನ್ ಖಾದ್ರಿಗೆ 2 ವರ್ಷ ಸಾದಾ ಶಿಕ್ಷೆ, 1000 ರೂ. ದಂಡ, ಬೆತ್ತನಗೆರೆ ಶಂಕರಗೌಡಗೆ 1 ವರ್ಷ ಸಾದಾ ಜೈಲುಶಿಕ್ಷೆ, 1000 ರೂ. ದಂಡ, ಮುನಿರಾಜು ಹಾಗೂ ಜಾವೇದ ಢಾಲಾಯತಗೆ 6 ತಿಂಗಳು ಸಾದಾ ಜೈಲುಶಿಕ್ಷೆ ಹಾಗೂ 1,000 ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶವಿತ್ತರು.
ವಿವಿಧ ಪ್ರಕರಣಗಳ ಅಡಿ ಬಂಧಿತರಾಗಿ ನಗರದ ಕೇಂದ್ರ ಕಾರಾಗೃಹದಲ್ಲಿ ಇದ್ದ ಆರೋಪಿಗಳು 2010ರ ಮೇ 23ರಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪ ಎದುರಿಸುತ್ತಿದ್ದರು. ಜೈಲಿನಲ್ಲಿ ಗಾಂಜಾ ಸೇರಿದಂತೆ ಇತರ ನಿಷೇಧಿತ ವಸ್ತುಗಳನ್ನು ಹೊಂದಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಂದಿನ ಎಸಿಪಿ ಸಂಜೀವ ಪಾಟೀಲ, ಉಪನಗರ ಠಾಣೆ ಇನ್ಸ್ಪೆಕ್ಟರ್ ವಿಜಯ ಬಿರಾದಾರ ಹಾಗೂ ಸಿಬ್ಬಂದಿ ತಪಾಸಣೆಗೆ ತೆರಳಿದ್ದರು. ಈ ವೇಳೆ ಅಡ್ಡಿಪಡಿಸಿದ್ದ ಆರೋಪಿಗಳು, ಪೊಲೀಸ್ ಸಿಬ್ಬಂದಿ ಎಸ್.ಎಚ್. ದೋಟಿಕಲ್, ಯು.ಐ. ಕಾಡಮ್ಮನವರ ಹಾಗೂ ಇತರರ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು.
ಹಿಂದಿನ ಪಿಎಸ್ಐಗಳಾದ ಮುರುಗೇಶ ಚನ್ನಣ್ಣವರ ಹಾಗೂ ವಿಶ್ವನಾಥ ಹಿರೇಗೌಡರ (ಭಾಗಶಃ ತನಿಖಾಧಿಕಾರಿ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆದು ಬುಧವಾರ ಅಪರಾಧ ಸಾಬೀತಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕಿಯರಾದ ಗಿರಿಜಾ ತಮ್ಮಿನಾಳ ಹಾಗೂ ಸರೋಜಾ ಹೊಸಮನಿ ವಾದ ಮಂಡಿಸಿದ್ದರು.