

ಚಿತ್ರದುರ್ಗ: ಜಿಪಂ, ತಾಪಂ ಕೆಡಿಪಿ ಸಭೆಗಳಲ್ಲಿ ಇನ್ನು ಮುಂದೆ ಶುದ್ಧ ಕುಡಿವ ನೀರಿನ ಘಟಕಗಳ ಸಮಸ್ಯೆಗಳ ಕುರಿತು ಪ್ರಸ್ತಾಪಿಸುವುದೇ ಇಲ್ಲ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ರದುರ್ಗ ತಾಲೂಕು ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಸಭೆ ಯಾವುದೇ ಇರಲಿ ಆರ್‌ಒಗಳ ಸಮಸ್ಯೆ ಇದ್ದೇ ಇರುತ್ತದೆ. ತಾಲೂಕಿನಲ್ಲಿ 106 ಘಟಕಗಳಿವೆ. ಸ್ಥಾಪನೆಯಾಗಿ ಹತ್ತು ವರ್ಷವಾಗಿರುವಂಥವುಗಳನ್ನು ಪಟ್ಟಿ ಮಾಡಿ ದುರಸ್ತಿಗೊಳಿಸಿ ಗ್ರಾಪಂಗಳಿಗೆ ಹಸ್ತಾಂತರಿಸಬೇಕು. ನಂತರ ಅವುಗಳನ್ನು ಸ್ವಸಹಾಯ ಸಂಘ, ಸಹಕಾರ ಸಂಘಗಳಿಗೆ ಒಪ್ಪಿಸೋಣ ಎಂದು ಶಾಸಕರು ಹೇಳಿದರು.
ಹಲವು ಗ್ರಾಮಗಳ ಆರ್‌ಒಗಳ ಸ್ಥಿತಿಗತಿ, ಜೆಜೆಎಂ ಕಾಮಗಾರಿ ಕುರಿತು ಚರ್ಚಿಸಲಾಯಿತು. ಇಲಾಖೆಯ ಎಇ ಶಿವಮೂರ್ತಿ ಮಾತನಾಡಿ, ಆರ್‌ಒಗಳ ದುರಸ್ತಿ ಹೊಣೆ ಹೊತ್ತಿರುವ ಏಜೆನ್ಸಿಗಳಿಗೆ ಬಿಲ್ ಪೆಂಡಿಂಗ್ ಇಡಲಾಗಿದೆ. ಆರ್‌ಒಗಳ ಅಪಾರ ವಿದ್ಯುತ್ ಬಿಲ್ ಮೊತ್ತದಿಂದಾಗಿ ಗ್ರಾಪಂಗಳು ಅವುಗಳನ್ನು ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ ಎಂದರು.
ನಗರದಲ್ಲಿ ಒಳಚರಂಡಿ ಅವ್ಯವಸ್ಥೆ ಹಾಗೂ ಕುಡಿವ ನೀರಿನ ಅಸಮರ್ಪಕ ಪೂರೈಕೆ ಸಮಸ್ಯೆ ಸಭೆಯಲ್ಲಿ ಅನಾವರಣಗೊಂಡಿತು.
ಮಾಳಪ್ಪನಹಟ್ಟಿಯಿಂದ ದುರ್ಗ ಮಾರ್ಗದಲ್ಲಿ ಶಾಂತಿಸಾಗರದಿಂದ ಪೂರೈಕೆಯಾಗುವ ಕುಡಿವ ನೀರಿನ ಪೈಪ್ ಒಡೆದು ನೀರು ವ್ಯರ್ಥವಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಹೇಳಿದರು.
ಒಳಚರಂಡಿ ಸ್ಲಾೃಬ್ ದುರಸ್ತಿಗೆ ಸರ್ಕಾರದಿಂದ ಅನುಮತಿ ಪಡೆಯಲು ಪ್ರಯತ್ನಿಸಲಾಗಿದೆ. ಕುಡಿವ ನೀರಿನ ಪೈಪ್‌ಲೈನ್ ಒಡೆದಿದ್ದರೆ ಪರಿಶೀಲಿಸಿ ಸರಿಪಡಿಸುವುದಾಗಿ ಮಂಡಳಿ ಅಧಿಕಾರಿ ತಿಳಿಸಿದರು.
ತುರ್ತು ಆರೋಗ್ಯ ಸೇವೆಗೆ ಅಗತ್ಯ ಬಿಪಿಎಲ್ ಕಾರ್ಡ್‌ಗಳನ್ನು ಮಂಜೂರಾತಿ ಮಾಡಿಸಬೇಕು. ಅನರ್ಹರನ್ನು ಪತ್ತೆ ಮಾಡಿ ಅವರ ಕಾರ್ಡ್‌ಗಳನ್ನು ರದ್ದುಪಡಿಸಬೇಕೆಂದು ಶಾಸಕರು ಆಹಾರ ಇಲಾಖೆ ನಿರೀಕ್ಷಕರಿಗೆ ಸೂಚಿಸಿದರು.
ಹಾಸ್ಟೆಲ್‌ಗಳ ನಿರ್ವಹಣೆಗೆ ಗಮನಹರಿಸುವಂತೆ ಶಾಸಕರು ನಿರ್ದೇಶಿಸಿದರು. ಕೆಲವೆಡೆ ಪಡಿತರದಾರರರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪರಿಶೀಲಿಸಲು ಹಾಗೂ ಮಹಿಳಾ ಸಮಾಜಕ್ಕೆ ಪಡಿತರ ಪೂರೈಸುತ್ತಿದ್ದ ವಿಷಯ ಕುರಿತಂತೆ ನೋಟಿಸ್ ಜಾರಿಗೆ ಶಾಸಕರು ತಹಸೀಲ್ದಾರ್ ಗೋವಿಂದರಾಜ್ ಅವರಿಗೆ ಸೂಚಿಸಿದರು.
ಅಕ್ರಮ-ಸಕ್ರಮ ಯೋಜನೆ ಅನುದಾನ ಬಂದಿಲ್ಲವೆಂದು ಬೆಸ್ಕಾಂ ಅಧಿಕಾರಿ ತಿಳಿಸಿದರು. ಬೆಸ್ಕಾಂನ ಮತ್ತೊಬ್ಬ ಅಧಿಕಾರಿಗೆ ನಾಡಗೀತೆಗೆ ಗೌರವ ಸಲ್ಲಿಸಬೇಕು ಎಂದು ಶಾಸಕರು ಎಚ್ಚರಿಸಿದರು. ಲೋಕೋಪಯೋಗಿ, ಪಿಆರ್‌ಇಡಿ, ಅಂಗನವಾಡಿ ಕಟ್ಟಡ, ನಿರ್ಮಿತಿ ಕೇಂದ್ರದ ಕಾಮಗಾರಿಗಳು ಮತ್ತಿರರ ವಿಚಾರಗಳು, ಅನುಪಾಲನ ವರದಿ ಕುರಿತು ಚರ್ಚಿಸಲಾಯಿತು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಚಿತ್ರದುರ್ಗ ತಾಲೂಕು ತುರುವನೂರು ಹೋಬಳಿಗೆ ಸಂಬಂಧಿಸಿದ ಕಾಮಗಾರಿಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ ಫಲಾನುಭವಿಗಳಿಗೆ ಆಟೋಮೊಬೈಲ್, ಗಾರೆ ಇತ್ಯಾದಿ ಕಿಟ್‌ಗಳನ್ನು ವಿತರಿಸಲಾಯಿತು.
ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ತಾಪಂ ಇಒ ವೈ. ರವಿಕುಮಾರ್, ತಾಲೂಕು ಕೆಡಿಪಿ ಸದಸ್ಯರಾದ ನಂದಿಪುರ ನಾಗರಾಜ್, ಸಂತೋಷ್, ನೂರುಲ್ಲಾ, ಸುನಂದಮ್ಮ ಇತರರು ಇದ್ದರು.
ಆಕ್ಷೇಪ
ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ತಾಲೂಕು ಅಧ್ಯಕ್ಷ ಪ್ರಕಾಶ್ ಮಾತನಾಡಿ,ಪ್ರಾಧಿಕಾರದ ಪ್ರಮುಖರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಅಧಿಕಾರಿಗಳ ನಡೆ ವಿರುದ್ಧ ಹರಿಹಾಯ್ದರು. ದೂರವಾಣಿ ಕರೆಗಳನ್ನೂ ಸ್ವೀಕರಿಸುವುದಿಲ್ಲವೆಂದು ಆಕ್ಷೇಪಿಸಿದರು.