ಬಗರ್​ಹುಕುಂ ರೈತರ ಸ್ಥಿತಿ ಅಯೋಮಯ

KAPPATAGUDDA...
Published on

ಗದಗ: ಕಪ್ಪತಗುಡ್ಡದ ಸೆರಗಿನಲ್ಲಿರುವ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಹಲವಾರು ದಶಕಗಳಿಂದ ಜೀವನ ನಡೆಸುತ್ತಿರುವ ಬಗರ್​ಹುಕುಂ ಸಾಗುವಳಿದಾರರ ಸ್ಥಿತಿ ಅತಂತ್ರವಾಗಿದೆ. ಕಪ್ಪತಗುಡ್ಡ ವನ್ಯಜೀವಿ ಧಾಮ ಎಂದು ಸರ್ಕಾರ ಘೊಷಣೆ ಮಾಡಿದ್ದಕ್ಕೆ ಜಿಲ್ಲೆಯ ಜನರು ಖುಷಿಪಡುತ್ತಿದ್ದಾರೆ. ಆದರೆ, ಹಲವಾರು ವರ್ಷಗಳಿಂದ ಅರಣ್ಯ ಭೂಮಿ ಉಳುಮೆ ಮಾಡಿಕೊಂಡು ಅದರಲ್ಲಿಯೇ ಜೀವನ ನಿರ್ವಹಣೆ ಮಾಡುವಂತಹ ನೂರಾರು ಕುಟುಂಬಗಳಿಗೆ ಸರ್ಕಾರದ ತೀರ್ವನವು ಆತಂಕ ತಂದಿದೆ.

ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಮಾಡಲು ಯಾವುದೇ ತಕರಾರು ಇಲ್ಲ. ಆದರೆ, ಹಲವಾರು ವರ್ಷಗಳಿಂದ ಗುಡ್ಡದ ಸೆರಗಿನಲ್ಲಿ ಭೂಮಿ ಸಾಗುವಳಿ ಮಾಡಿ ಜೀವನ ಮಾಡುತ್ತಿರುವ ಬಗರ್​ಹುಕುಂ ಸಾಗುವಳಿದಾರರ ಸ್ಥಿತಿ ಏನು? ಇಲ್ಲಿಯವರೆಗೆ ಸಾಗುವಳಿ ಭೂಮಿಗೆ ಸರ್ಕಾರ ಹಕ್ಕುಪತ್ರ ನೀಡಿಲ್ಲ. ಶಾಸಕರು, ಸಚಿವರು ಇಲ್ಲಿನ ಜನರಿಗೆ ಸುಳ್ಳು ಭರವಸೆ ನೀಡಿ ಮತ ಹಾಕಿಸಿಕೊಂಡರೆ ಹೊರತು ಯಾರೂ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಹೀಗಾಗಿ, ಬಗರ್​ಹುಕುಂ ರೈತರ ಸ್ಥಿತಿ ಅಯೋಮಯವಾಗಿದೆ.

ವನ್ಯಜೀವಿಧಾಮ ಕುರಿತು ಸರ್ಕಾರವು ಹೊರಡಿಸಿದ ಘೊಷಣೆಯಲ್ಲಿ ಕಂದಾಯ ಗ್ರಾಮ, ಕಂದಾಯ ಭೂಮಿ ಮತ್ತು ಪಟ್ಟಾ ಭೂಮಿಗಳನ್ನು ಹೊಂದಿರುವ ರೈತರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಹಲವಾರು ವರ್ಷ ಭೂಮಿ ಸಾಗುವಳಿ ಮಾಡಿದ ರೈತರ ಬಳಿ ದಾಖಲೆಗಳು ಇಲ್ಲ. ಸಾಗುವಳಿ ಮಾಡಲಾಗಿರುವ ಭೂಮಿ ಸರ್ಕಾರಿ ಭೂಮಿ ಎಂದು ದಾಖಲೆಯಲ್ಲಿ ಇರುವುದರಿಂದ ಆತಂಕ ಶುರುವಾಗಿದೆ.

ತೆರವು ಖಚಿತ?: ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸಬೇಕು. ಈ ವಿಷಯದಲ್ಲಿ ಯಾವುದೇ ರಾಜಿ ಸಂಧಾನ ಇಲ್ಲ. ಅಗತ್ಯ ದಾಖಲೆಗಳಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಬಹುತೇಕ ಬಗರ್​ಹುಕುಂ ಸಾಗುವಳಿ ರೈತರ ಬಳಿ ದಾಖಲೆಗಳು ಇಲ್ಲ. ಕೆಲವರ ಬಳಿ ದಾಖಲೆಗಳಿದ್ದರೂ ಅವು ಅರಣ್ಯ ಇಲಾಖೆ ಷರತ್ತುಗಳಿಗೆ ಒಳಪಡುವುದಿಲ್ಲ. ವನ್ಯಜೀವಿಧಾಮ ವ್ಯಾಪ್ತಿಯ ಗಡಿಯಿಂದ ಒಂದು ಕಿಮೀ ಒಳಗಿರುವ ಕಲ್ಲಿನ ಕ್ವಾರಿ ಮತ್ತು ಮರಳು ಬ್ಲಾಕ್​ಗಳನ್ನು ಬಂದ್ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ನೋಟಿಸ್ ನೀಡಿರುವ ಬೆನ್ನಲ್ಲೇ ಬಗರಹುಕುಂ ಸಾಗುವಳಿದಾರರಲ್ಲಿ ನಡುಕ ಶುರುವಾಗಿದೆ. ಕಪ್ಪತಗುಡ್ಡ ಸೆರಗಿನಲ್ಲಿ ಸರ್ಕಾರಿ ಭೂಮಿ ಉಳುಮೆ ಮಾಡುತ್ತಿರುವ ಬಗರ್​ಹುಕುಂ ಸಾಗುವಳಿದಾರರು ಸರ್ಕಾರಿ ಭೂಮಿಯನ್ನು ಮರಳಿ ನೀಡಬೇಕು ಎಂದು ನೋಟಿಸ್ ನೀಡಿದರೆ ಮುಂದೇನು ಎಂಬ ಚಿಂತೆ ರೈತರಲ್ಲಿ ಉಂಟಾಗಿದೆ.

1500ಕ್ಕೂ ಹೆಚ್ಚು ರೈತರು ಅತಂತ್ರ: ಜಿಲ್ಲೆಯ ಮುಂಡರಗಿ, ಶಿರಹಟ್ಟಿ ಮತ್ತು ಗದಗ ತಾಲೂಕಿನ 1500ಕ್ಕೂ ಹೆಚ್ಚು ರೈತರು 3000ಕ್ಕೂ ಹೆಚ್ಚು ಎಕರೆ ಸರ್ಕಾರಿ ಭೂಮಿಯನ್ನು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮುಂಡರಗಿ ತಾಲೂಕಿನ ಡೋಣಿ ಗ್ರಾಮದ 446 ರೈತರ 1297 ಎಕರೆ, ಸುಂಕದೊಡಕ ಗ್ರಾಮದ 119 ರೈತರ 375 ಎಕರೆ, ಬೀಡನಾಳ, ವಿರುಪಾಪುರ, ಕಲ್ಲೂರ, ಮುರಡಿ ಗ್ರಾಮಗಳ 5 ರೈತರ 14 ಎಕರೆ, ಬಾಗೇವಾಡಿ, ಮುಂಡವಾಡ, ಬಿದರಳ್ಳಿ, ಹಾರೋಗೇರಿ, ಗ್ರಾಮಗಳ 14 ರೈತರ 35 ಎಕರೆ, ದಿಂಡೂರಿನ 33 ರೈತರ 93 ಎಕರೆ, ಹಿರೇವಡ್ಡಟ್ಟಿಯ 25 ರೈತರ 55 ಎಕರೆ, ಅತ್ತಿಕಟ್ಟಿಯ 47 ರೈತರ 157 ಎಕರೆ, ಸಿಂಗಟಾರಾಯಕೆರೆಯ 20 ರೈತರ 77 ಎಕರೆ, ಡಂಬಳ ಗ್ರಾಮದ 38 ರೈತರ 115 ಎಕರೆ ಇದರಲ್ಲಿ ಸೇರಿದೆ.

ಗದಗ ತಾಲೂಕಿನ ಸೊರಟೂರು ಮತ್ತು ಮಹಾಲಿಂಗಪುರದ ತಾಂಡಾದ 105 ರೈತರ 396 ಎಕರೆ, ಬೆಳಧಡಿಯ 23 ರೈತರ 50 ಎಕರೆ, ಕಬಲಾಯತಕಟ್ಟಿಯ 74 ರೈತರ 169 ಎಕರೆ, ನಭಾಪುರದ 142 ರೈತರ 427 ಎಕರೆ, ಪಾಪನಾಯ 92 ರೈತರ 312 ಎಕರೆ, ಅಡವಿಸೋಮಾಪುರದ ಮತ್ತು ಅಡವಿಸೋಮಾಪುರ ತಾಂಡಾದ 122 ರೈತರ 342 ಎಕರೆ. ಶಿರಹಟ್ಟಿ ಮತ್ತು ಲಕ್ಷೆ್ಮೕಶ್ವರ ತಾಲೂಕಿನ ಅಕ್ಕಿಗುಂದದ 39 ರೈತರ 102, ಶೆಟ್ಟಿಕೇರಿಯ 101 ರೈತರ 180 ಎಕರೆ, ಜಲ್ಲಿಗೇರಿಯ 64 ರೈತರ 99 ಎಕರೆ, ಕಡಕೋಳದ 22 ರೈತರ 56 ಎಕರೆ, ಪರಸಾಪುರದ 24 ರೈತರ 38 ಎಕರೆ, ಬಾಲೇಹೊಸೂರಿನ 5 ರೈತರ 16 ಎಕರೆ ಸೇರಿ ಒಟ್ಟು 1500 ಎಕರೆಗೂ ಹೆಚ್ಚು ಸಾಗುವಳಿ ಭೂಮಿ ವನ್ಯಜೀವ ಅಭಯಾರಣ್ಯ ವ್ಯಾಪ್ತಿಗೆ ಬರಲಿದೆ. ಇದಲ್ಲದೆ, ಇನ್ನೂ 1000 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ಮಾಡಿಸಿದ ಸರ್ವೆ ಮೂಲಕ ಗೊತ್ತಾಗಿದೆ.

ಗಾಳಿ ಯಂತ್ರ ಅತಂತ್ರ

ಕಪ್ಪತಗುಡ್ಡದ ಕೆಳಭಾಗದ ನೂರಾರು ಹೆಕ್ಟೇರ್ ಪ್ರದೇಶ ಅತಿಕ್ರಮಣವಾಗಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಒತ್ತುವರಿ ಭೂಮಿ ತೆರವುಗೊಳಿಸುವ ಕುರಿತು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ ತಿಕ್ಕಾಟ ನಡೆದೇ ಇರುವುದು ಇಂದು ನಿನ್ನೆಯದಲ್ಲ. ವೋಟಿನ ಆಸೆಗಾಗಿ ರಾಜಕಾರಣಿಗಳು ಅಧಿಕಾರಿಗಳ ಕೈಕಟ್ಟಿ ಹಾಕಿ ಉಸಿರೆತ್ತದಂತೆ ಮಾಡಿದ್ದಾರೆ. ಜತೆಗೆ ಕಪ್ಪತಗುಡ್ಡದ ಸಾಲಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವಂತಹ ನೂರಾರು ಗಾಳಿ ಯಂತ್ರಗಳ (ವಿಂಡ್ ಮಿಲ್) ಸ್ಥಾಪನೆಯಾಗಿವೆ. ವನ್ಯಜೀವಿ ಧಾಮ ಎಂದು ಸರ್ಕಾರ ಘೊಷಣೆ ನಂತರವೂ ಗಾಳಿಯಂತ್ರಗಳು ನಿರಾತಂಕವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದ ಟಾಸ್ಕ್ ಫೋರ್ಸ್ ಸಮಿತಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬಗರ್​ಹುಕುಂ ಸಾಗುವಳಿ ಪ್ರಕರಣ ಕಂದಾಯ ಇಲಾಖೆ ವ್ಯಾಪ್ತಿಗೆ ಬರಲಿದೆ.| ಸೂರ್ಯಸೇನ ಡಿಎಫ್​ಒ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net