ಬಗರ್‌ಹುಕುಂ ಹಕ್ಕುಪತ್ರಕ್ಕಾಗಿ ಎಐಕೆಕೆಎಂಎಸ್ ಪ್ರತಿಭಟನೆ

Aikkms.jpg
Published on

ದಾವಣಗೆರೆ: ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್)ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ, ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ 80 ವರ್ಷದಿಂದ ಭೂಹೀನ ಬಡರೈತರು, ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯದ ಕುರುಚಲುಗಿಡ, ಕಲ್ಲು ಭೂಮಿ ಇರುವ ಪ್ರದೇಶದಲ್ಲಿ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದಾರೆ. ಕೈಗಾರಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗದಿದ್ದರಿಂದ ಅನಿವಾರ್ಯವಾಗಿ ಜೀವನ ನಿರ್ವಹಣೆಗೆ ಸಾಗುವಳಿ ಮಾಡುತ್ತಿರುವುದು ಸರ್ಕಾರದ ಗಮನದಲ್ಲಿದೆ.

ಉಳುಮೆಗೆ ಅವಕಾಶ ಕೊಟ್ಟಿರುವ ಸರ್ಕಾರಗಳು, ಹಕ್ಕುಪತ್ರ ನೀಡುತ್ತಿಲ್ಲ. ಶಾಸನಬದ್ಧವಾಗಿ ಭೂಮಿಯ ಹಕ್ಕು ದೊರೆಯದ್ದರಿಂದಾಗಿ ಕೃಷಿ ಬೆಳೆ ಸಾಲ, ಕೃಷಿ ಪರಿಕರಗಳ ಮೇಲಿನ ಸಾಲ, ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಲ್ಪಾವಧಿ ಸಾಲವೂ ದೊರೆಯದಂತಾಗಿದೆ.

ಇದುವರೆಗೆ ಬಗರ್‌ಹುಕುಂ ಸಾಗುವಳಿದಾರರ 12 ಲಕ್ಷ ಅರ್ಜಿಗಳು ಸರ್ಕಾರದ ಮುಂದಿದ್ದರೂ ಹಕ್ಕುಪತ್ರ ನೀಡಲಾಗಿಲ್ಲ. ಲಕ್ಷಾಂತರ ಭೂಹೀನರು, ಬಡ ರೈತರು ಅರ್ಜಿ ಹಾಕಲು ಕಾಯುತ್ತಿದ್ದರೂ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ ಎಂದು ಸಂಘಟನಾಕಾರರು ದೂರಿದರು.

ಹಕ್ಕುಪತ್ರ ನೀಡುವವರೆಗೆ ಅಂತಹ ರೈತರ ಜಮೀನುಗಳಿಗೆ ರಕ್ಷಣೆ ಕೊಡಬೇಕು. ಸಾಗುವಳಿದಾರರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ಕಿರುಕುಳ ನಿಲ್ಲಿಸಬೇಕು. ಫಾರಂ ನಂ. 53ರಡಿ ಸಲ್ಲಿಸಲಾದ ಅರ್ಜಿಗಳಲ್ಲಿ ಬಹುತೇಕವು ತಿರಸ್ಕೃತಗೊಂಡಿದ್ದು ಅವನ್ನು ಮರು ಪರಿಶೀಲಿಸಬೇಕು.

ಜಿಲ್ಲೆಯ ನೀರ್ಥಡಿ, ನಲ್ಕುಂದ, ಮ್ಯಾಸರಹಳ್ಳಿ, ಗುಡಾಳು, ಕಂದನಕೋವಿ, ಕೆಂಚೇನಹಳ್ಳಿ, ಹುಣಸೇಕಟ್ಟೆ, ಮಾಯಕೊಂಡ, ಬುಳ್ಳಾಪುರ, ಬಾವಿಹಾಳು ಮುಂತಾದ ಗ್ರಾಮಗಳ ಸಾಗುವಳಿದಾರರ ನೆರವಿಗೆ ತಾವು ಧಾವಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಉಪಾಧ್ಯಕ್ಷ ಬಸವರಾಜಪ್ಪ ನೀರ್ಥಡಿ, ಲೋಕೇಶ್ ಬೀರಲಿಂಗಣ್ಣ, ನಾಗರಜ್ ರಾಮಗೊಂಡನಹಳ್ಳಿ, ಡಾ. ಸುನೀತ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ನಾಗಸ್ಮಿತಾ, ಎಸ್‌ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ, ನಲ್ಕುಂದ, ಮ್ಯಾಸರಹಳ್ಳಿಯ ಮುಖಂಡರಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net