

ಕಂಪ್ಲಿ: ಬಗರ್‌ಹುಕುಂ ಸಾಗುವಳಿ ಅರ್ಜಿಗಳನ್ನು ಮರುಪರಿಶೀಲಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಶುಕ್ರವಾರ ಮನವಿ ಸಲ್ಲಿಸಿದರು.
ವಿಭಾಗೀಯ ಸಂಘಟನಾ ಸಂಚಾಲಕ ಕೆ.ಮೆಹಬೂಬ್ ಮಾತನಾಡಿ, ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯಭೂಮಿ, ಸಾಮಾಜಿಕ ಅರಣ್ಯೀಕರಣ, ಗೋಮಾಳಕ್ಕೆ ಕಾಯ್ದಿರಿಸಿದ ನೆಪದಲ್ಲಿ ಒಕ್ಕಲೆಬ್ಬಿಸುವುದು ಖಂಡನೀಯ. ಉಳುಮೆ ಮಾಡುತ್ತಿಲ್ಲ ಎನ್ನುವ ನೆಪದಲ್ಲಿ ಅರ್ಜಿಗಳನ್ನು ವಜಾಗೊಳಿಸಿದ್ದು ಸರಿಯಲ್ಲ ಎಂದರು.
ದಲಿತರು, ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್‌ಹುಕುಂ ಸಾಗುವಳಿ ಅರ್ಜಿಗಳನ್ನು ಮರುಪರಿಶೀಲಿಸಬೇಕು. ಪಿಟಿಸಿಎಲ್ ಕಾಯ್ದೆಯ ತಿದ್ದುಪಡಿಯನ್ನು ಮಾನ್ಯ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಟ್ಟಣದ ಹುಲಿಗೆಮ್ಮ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗದವರಿಗೆ ಆಶ್ರಯ ಯೋಜನೆಯಡಿ ನೀಡಿದ ಹಕ್ಕುಪತ್ರಗಳಿಗೆ ನಿವೇಶನ ವಿತರಿಸಬೇಕು. ಎಸ್‌ಸಿಎಸ್‌ಪಿ-ಟಿಎಸ್‌ಪಿ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಾಲಯ, ಏಕಗವಾಕ್ಷಿ ಯೋಜನೆ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಫ್ರಾನ್ಸೀಸ್, ತಾಲೂಕು ಸಂಚಾಲಕ ಕಾರೇಕಲ್ ಕೃಷ್ಣ, ತಾಲೂಕು ಸಂಘಟನಾ ಸಂಚಾಲಕ ರಾಜೇಶ್, ಪದಾಧಿಕಾರಿಗಳಾದ ಎನ್.ರುದ್ರಪ್ಪ, ವೆಂಕಟೇಶ್ ಬೆಳಗೋಡ್, ಎನ್.ಗೋಪಿನಾಥ, ಸಿಂಧೋಳ್ಳು ವೆಂಕಟೇಶ, ಚಿನ್ನಾ, ವೆಂಕಿ, ಸಂದೀಪ್, ನಿತಿನ್ ಇತರರಿದ್ದರು.