ಬಗರ್‌ಹುಕುಂ ಸಾಗುವಳಿ ಚೀಟಿ ವಿತರಿಸಿ

bume vasati harata samithi (1)--04
Published on

ಚಿತ್ರದುರ್ಗ: ಬಗರ್‌ಹುಕುಂ ಸಾಗುವಳಿ ಸಂಬಂಧ ಫಾರಂ ನಂ.50, 53, 57ರ ಅಡಿ ಅರ್ಜಿ ಸಲ್ಲಿಸಿರುವ ಭೂ ರಹಿತರೆಲ್ಲರಿಗೂ ಭೂಮಿ ಮಂಜೂರು ಮಾಡುವಂತೆ ಭೂಮಿ-ವಸತಿ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನೇಕ ದಶಕಗಳಿಂದ ಅರಣ್ಯ ಮತ್ತು ಕಂದಾಯ ಇಲಾಖೆ ವ್ಯಾಪ್ತಿಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಅರ್ಹರೆಲ್ಲರಿಗೂ ಸಾಗುವಳಿ ಚೀಟಿ ವಿತರಿಸಬೇಕು. ಚಿತ್ರದುರ್ಗ ಜಿಲ್ಲೆಯಲ್ಲೇ 1.30 ಲಕ್ಷ, ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿ, ಸೌಲಭ್ಯಕ್ಕಾಗಿ ಕಾದು ಕುಳಿತಿದ್ದಾರೆ.

ಸರ್ಕಾರ ಕೇವಲ ಭರವಸೆ ನೀಡುವ ಬದಲು ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ರಾಜ್ಯದ ಎಲ್ಲ ಬಡವರಿಗೂ ಭೂಮಿ-ವಸತಿ ಸೌಲಭ್ಯ ನೀಡುವ ಕುರಿತು ಸರ್ಕಾರ ಗ್ಯಾರಂಟಿ ಘೋಷಿಸಬೇಕು. ಬಗರ್‌ಹುಕುಂ ಹಕ್ಕಿಗಾಗಿ ಸತತ ಎರಡ್ಮೂರು ದಶಕದಿಂದ ಹೋರಾಟ ಮಾಡುತ್ತಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಶಾಸಕರ ಅಧ್ಯಕ್ಷತೆಯಲ್ಲೇ ಭೂಮಂಜೂರಾತಿ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

94ಸಿ, 94ಸಿಸಿ ಅಡಿಯಲ್ಲಿ ವಾಸದ ಜಾಗ, ಮನೆಗಳಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಸೌಕರ್ಯ ಒದಗಿಸಬೇಕು. ಯಾವ ಕಾರಣಕ್ಕೂ ವಾಸಿಸುವ ಜಾಗ, ಸಾಗುವಳಿ ಮಾಡುವ ಭೂಮಿಯಿಂದ ಅರ್ಹರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು. ಮುಖಂಡರಾದ ಸತ್ಯಪ್ಪ, ಹನುಮಂತಪ್ಪ, ಶಿವುಕುಮಾರ್, ಕರಿಯಪ್ಪ, ಹಿರಜ್ಜ, ವೆಂಕಟೇಶ್, ನಾಗರಾಜ್, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net