

ಸೊರಬ: ಕುಮಾರ ಬಂಗಾರಪ್ಪ ಸದನದಲ್ಲಿ ಒಮ್ಮೆಯೂ ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಧ್ವನಿ ಎತ್ತಲಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ಮಾಡಿದರು.
ಕಳೆದ ಚುನಾವಣೆಯಲ್ಲಿ ಜನತೆ ನೀಡಿದ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಅವರು ವಿಫಲರಾಗಿದ್ದಾರೆ. ಕ್ಷೇತ್ರದ ಶಾಸಕರು ಮೊದಲು ಮತ ನೀಡಿದವರನ್ನು ವಿಶ್ವಾಸಕ್ಕೆ ಪಡೆಯಬೇಕು. ನಮೋ ವೇದಿಕೆಯ ಕಾರ್ಯಕರ್ತರೇ ಕ್ಷೇತ್ರದಲ್ಲಿ ನಿಜವಾದ ಬಿಜೆಪಿ ಕಾರ್ಯಕರ್ತರು. ಚುನಾವಣೆಯಲ್ಲಿ ಗೆಲುವಿಗೆ ಕಾರಣದವರಿಗೆ ಗೌರವ ನೀಡದ ಕ್ಷೇತ್ರದ ಶಾಸಕರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸರ್ಕಾರಿ ನೌಕರರು ಶಾಸಕರೊಬ್ಬರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ರಾಜ್ಯದಲ್ಲಿ ಇದೇ ಮೊದಲು. ಅದು ಸೊರಬ ಕ್ಷೇತ್ರದ ಶಾಸಕರ ವಿರುದ್ಧ ಎಂಬುದೇ ದುರ್ದೈವ ಎಂದರು.
ಉತ್ತಮ ಅಭಿಪ್ರಾಯ: ರಾಜ್ಯದಲ್ಲಿ ಪ್ರವಾಸ ಕೈಗೊಂಡ ವೇಳೆ ಕಾಂಗ್ರೆಸ್ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪಕ್ಷದಿಂದ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ದೊರೆಯುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು. ಬಿಜೆಪಿ ಸರ್ಕಾರದ ವಿರುದ್ಧ ಜನತೆ ಬೇಸತ್ತು ಹೋಗಿದ್ದಾರೆ. ಗ್ರಾಪಂ, ತಾಪಂನಲ್ಲಿ ಅನುದಾನವಿಲ್ಲ. ಎಲ್ಲಾ ಅನುದಾನಗಳನ್ನು ಮೇಲ್ಮಟ್ಟದಲ್ಲಿಯೇ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. .
ಶಿವಮೊಗ್ಗದಲ್ಲಿ ನೂರಾರು ಕೋಟಿ ರೂ. ವೆಚ್ಚ ಮಾಡಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಅಲ್ಲಿ ವಿಮಾನ ಹಾರಾಟ ಮಾಡುವುದು ಅನುಮಾನ. ಜನತೆಗೆ ಅವಶ್ಯಕತೆ ಇರುವ ರೈಲುಗಳ ಸಂಖ್ಯೆ ಹೆಚ್ಚಿಸಬೇಕಿತ್ತು. ಹೆದ್ದಾರಿಗಳ ಅಭಿವೃದ್ಧಿಗೆ ಒತ್ತು ನೀಡಬೇಕಿತ್ತು. ವಿಮಾನವೇ ಹಾರದ ವಿಮಾನ ನಿಲ್ದಾಣ ಪಡೆದು ಏನು ಮಾಡುವುದು ಎಂದರು.