ಬಗರ್‌ಹುಕುಂ ಯೋಜನೆಯಡಿ 1750 ಕೋಟಿ ರೂ. ಅಕ್ರಮ ಆರೋಪದಲ್ಲಿ ಹುರುಳಿಲ್ಲ : ಬೇಲೂರು ಶಾಸಕ ಕೆ.ಎಸ್. ಲಿಂಗೇಶ್

ಬಗರ್‌ಹುಕುಂ ಯೋಜನೆಯಡಿ 1750 ಕೋಟಿ ರೂ. ಅಕ್ರಮ ಆರೋಪದಲ್ಲಿ ಹುರುಳಿಲ್ಲ : ಬೇಲೂರು ಶಾಸಕ ಕೆ.ಎಸ್. ಲಿಂಗೇಶ್
Published on

    ಹಾಸನ : ಬಸವಣ್ಣನವರ ಅನುಯಾಯಿಯಾಗಿ, ಅಂಬೇಡ್ಕರ್ ಅಭಿಮಾನಿಯಾಗಿ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದ ಹಾಗೆ ಕ್ಷೇತ್ರದ ಜನರ ಸೇವಕನಾಗಿ ಕೆಲಸ ಮಾಡಿದ್ದೇನೆ. ಆದರೆ ನನ್ನ ರಾಜಕೀಯ ಜೀವನದ ಏಳಿಗೆ ಸಹಿಸದೆ ನನ್ನ ಮೇಲೆ ಬಗರ್‌ಹುಕುಂನಲ್ಲಿ ಅವ್ಯವಹಾರ ಮಾಡಿದ್ದೇನೆ ಎಂಬ ಆರೋಪ ಮಾಡಿದ್ದಾರೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್. ಲಿಂಗೇಶ್ ಸ್ಪಪ್ಟಪಡಿಸಿದರು.
      ಚುನಾವಣೆ ಸಂದರ್ಭದಲ್ಲಿ ನನ್ನ ತೇಜೊವಧೆ ಮಾಡಲು ಮತ್ತು ರಾಜಕೀಯವಾಗಿ ನನ್ನನ್ನು ಎದುರಿಸಲಾಗದೇ ಇದ್ದವರು ಈ ರೀತಿ ವಾಮಮಾರ್ಗದಲ್ಲಿ ನನ್ನನ್ನು ಹತ್ತಿಕ್ಕಲು ಸಂಚು ನಡೆಸಿದ್ದಾರೆ. ಯಾವುದೇ ಒಂದು ಆರೋಪಗಳಿಲ್ಲದೆ ಕೆಲಸ ಮಾಡಿರುವ ನನ್ನ ಮೇಲೆ 2750 ಎಕರೆ ಭೂಮಿ ಮಂಜೂರಾತಿಯಲ್ಲಿ 1750 ಕೋಟಿ ರೂ. ಅಕ್ರಮ ನಡೆದಿದೆ ಎಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
     ಇತ್ತೀಚೆಗಷ್ಟೇ ಬಿಜೆಪಿ ಬೇಲೂರು ತಾಲ್ಲೂಕು ಅಧ್ಯಕ್ಷ ಅಡಗೂರು ಆನಂದ್ ಎಂಬುವವರು, ಶಾಸಕ ಲಿಂಗೇಶ್ ಅವರು ಬಗರ್‌ಹುಕುಂನಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದಾದ ನಂತರ ಕೋಲಾರದ ಸಾಮಾಜಿಕ ಕಾರ್ಯಕರ್ತ ರಾಜಣ್ಣ ಎಂಬಾತ ಬೇಲೂರಿನಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಆದರೆ ಅದರಲ್ಲಿ ಹುರುಳಿಲ್ಲ ಎಂದು ತಿಳಿದ ಪೊಲೀಸರು ಪ್ರಕರಣ ದಾಖಲಿಸಿಲ್ಲ. ನಂತರ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನನ್ನ ತೇಜೋವಧೆಗೆ ವಿರೋಧಿಗಳು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
      ನ್ಯಾಯಾಲಯದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ನ್ಯಾಯಾಲಯವೂ ಕೂಡ ಯಾವುದೇ ಪ್ರಕರಣಗಳನ್ನು ಉಲ್ಲೇಖಿಸಿಲ್ಲ. ಸರಿಯಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು. 2015-16ರಲ್ಲಿ ಅಕ್ರಮವಾಗಿದ್ದರೆ ಆಗ ನಾನು ಶಾಸಕನಾಗಿರಲಿಲ್ಲ. 2019ರ ಜುಲೈ 26ರಂದು ಮೊದಲ ಬಗರ್‌ಹುಕುಂ ಸಮಿತಿಯ ಸಭೆ ನಡೆದಿದೆ. ಆನಂತರ ಕೆಲ ಸಭೆಗಳ ಬಳಿಕ ನಮ್ಮ ಸರ್ಕಾರ ಪತನವಾದ ಮೇಲೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ನಂತರ ಅವರ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಸಮಿತಿಗೆ ಸೇರಿಸಲಾಗಿದೆ. ಹಾಗಾದರೆ ಅವರು ತಪ್ಪು ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.
      ನಾನು ಶಾಸಕನಾದ ಮೇಲೆ 2019 ಜುಲೈ 26ರಿಂದ 2023 ಮಾ.28ರವರೆಗೆ ಒಟ್ಟು 720 ಎಕರೆ ಜಮೀನನ್ನು ಬಗರ್‌ಹುಕುಂನ ಕಾನೂನಿನಡಿ ಮಂಜೂರು ಮಾಡಿಕೊಡಲಾಗಿದೆ. ಇದರಲ್ಲಿ 562 ಮಂದಿ ಫಲಾನುಭವಿಗಳಿಗೆ ಅನುಕೂಲವಾಗಿದೆ. ಇನ್ನೂ 70ರಿಂದ 80 ಅರ್ಜಿಗಳಲ್ಲಿ ಕಾನೂನು ತೊಡಕುಗಳಿಂದ ಅವುಗಳನ್ನು ವಜಾಗೊಳಿಸಲಾಗಿದೆ. ಎಲ್ಲವೂ ಕೂಡ ಕಾನೂನಿನಡಿಯಲ್ಲೇ ಕೆಲಸ ಮಾಡಿದ್ದೇನೆ. ಯಾವುದೇ ತನಿಖೆ ಬೇಕಾದರೂ ನಡೆಯಲಿ ಎಂದು ಸವಾಲು ಹಾಕಿದರು.
      ನಾನು ಓರ್ವ ರೈತರ ಮಗನಾಗಿ ಜನ ಸೇವೆ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ. ಶುದ್ಧ ಹಸ್ತದಿಂದ ಕೆಲಸ ಮಾಡಿದ್ದೇನೆ. ಸದನದಲ್ಲೂ ಕೂಡ ಕ್ಷೇತ್ರದ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟಿದ್ದೇನೆ. ಇದರಿಂದ ಕೋಟ್ಯಂತರ ರೂ.ಗಳ ಅನುದಾನವನ್ನು ತಂದು ಕೆಲಸ ಮಾಡಿದ್ದೇನೆ. ಇದರ ಕ್ರೆಡಿಟ್ ಬರುತ್ತದೆ ಎಂಬ ಕಾರಣಕ್ಕೆ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ವೇಳೆ ನಾನು ರಾಜಕೀಯವಾಗಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದು ಸಾಬೀತಾದರೆ ನೇಣಿಗೆ ಶರಣಾಗುವೆ ಎಂದು ನೊಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಹುಲುಗುಂಡಿ ಗ್ರಾಪಂ ಅಧ್ಯಕ್ಷ ಮಲ್ಲೇಶಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net