

ವಿಜಯವಾಣಿ ಸುದ್ದಿಜಾಲ ಆನೇಕಲ್
ಉಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದನಪಾಳ್ಯದಲ್ಲಿ ಒಂದೇ ಮನೆಯಲ್ಲಿದ್ದ ಯುವಕರಿಬ್ಬರು ಬಟ್ಟೆ ತೊಳೆಯಲು ಬಕೆಟ್ ಬೇಕೆಂಬ ವಿಚಾರಕ್ಕೆ ಮಾಡಿಕೊಂಡ ಗಲಾಟೆಯಲ್ಲಿ ಒಬ್ಬನ ಕೊಲೆಯಾಗಿದೆ.
ಬಿಹಾರ ಮೂಲದ ನಿತೀಶ್ ಕುಮಾರ್(26) ಕೊಲೆಯಾದವ. ಜಾರ್ಖಂಡ್ ಮೂಲದ ಸೋಮನಾಥ್ ಆರೋಪಿ. ಇಂಡ್ಲವಾಡಿ ಸಮೀಪದ ಖಾಸಗಿ ಕಂಪನಿ ಯಲ್ಲಿ ಇಬ್ಬರೂ ಕೆಲಸ ಮಾಡುತ್ತಿ ದ್ದರು. ಅದೇ ಕಂಪನಿ ನೀಡಿದ್ದ ಮನೆಯಲ್ಲಿ ವಾಸ ಇದ್ದರು. ಭಾನುವಾರ ಬಟ್ಟೆ ತೊಳೆಯಲು ಮುಂದಾಗಿದ್ದ ಇಬ್ಬರೂ ಮನೆಯಲ್ಲಿದ್ದ ಬಕೆಟ್ ತೆಗೆದುಕೊಳ್ಳಲು ಗಲಾಟೆ ಮಾಡಿಕೊಂಡಿದ್ದರು. ಈ ಬಗ್ಗೆ ನಿತೀಶ್ ಕುಮಾರ್ ಮೇಲೆ ಸೋಮನಾಥ್ ಸೋಮವಾರವೂ ಗಲಾಟೆ ಮಾಡಿದ್ದ. ಮಂಗಳವಾರ ರಾತ್ರಿ ಮತ್ತೆ ಗಲಾಟೆ ಆಗಿತ್ತು. ತಡರಾತ್ರಿ ಕೊಠಡಿಯಲ್ಲಿ ಮಲಗಿದ್ದ ನಿತೀಶ್ ಕುಮಾರ್ ತಲೆ ಮೇಲೆ ಸೋಮನಾಥ್ ಸಿಮೆಂಟ್ ಇಟ್ಟಿಗೆ ಹಾಕಿದ್ದು, ತೀವ್ರ ಗಾಯಗೊಂಡ ನಿತೀಶ್ ಕುಮಾರ್ ರಕ್ಷಣೆಗೆ ಕಿರುಚಿಕೊಂಡಿದ್ದಾನೆ. ಈ ವೇಳೆ ಅಕ್ಕಪಕ್ಕದ ನಿವಾಸಿಗಳು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಆತ ಮೃತಪಟ್ಟಿದ್ದಾನೆ. ಪೊಲೀಸರು ಸೋಮನಾಥನನ್ನು ವಶಕ್ಕೆ ಪಡೆದಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ಮತ್ತು ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಂಪನಿಯ ಮಾಲೀಕ ಮತ್ತು ಕಾರ್ಮಿಕರ ಜತೆ ಮಾಹಿತಿ ಪಡೆದಿದ್ದಾರೆ. ಆನೇಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.